ಅನಿರುದ್ಧ್ ರವಿಚಂದರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಾವ್ಯಾ ಮಾರನ್ ಜೊತೆಗಿನ ಮದುವೆ ಫೋಟೋ. 
ಕಾಲಿವುಡ್

"ಜೀವಮಾನವಿಡೀ ಜೊತೆಯಾಗಿರುವ ಸಂಗಾತಿ": ಗ್ರೀಸ್‌ನಲ್ಲಿ ಸಪ್ತಪದಿ ತುಳಿದ ಅನಿರುದ್ಧ್- ಕಾವ್ಯಾ; ಮದುವೆ ಫೋಟೋಗಳು ವೈರಲ್! Anirudh Weds Kavya

ಗ್ರೀಸ್​: ಭಾರತೀಯ ಚಿತ್ರರಂಗ ಮತ್ತು ಕ್ರಿಕೆಟ್ ಲೋಕದ ಬಹುನಿರೀಕ್ಷಿತ ಜೋಡಿ, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವೆಂಬರ್ 11 ರಂದು ಗ್ರೀಸ್‌ನ ಸುಂದರ ತಾಣವೊಂದರಲ್ಲಿ, ಕುಟುಂಬಸ್ಥರು ಮತ್ತು ಆಪ್ತ ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಕಳೆದೊಂದು ವರ್ಷದಿಂದ ಹರಿದಾಡುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ಈ ಮೂಲಕ ಅಧಿಕೃತ ತೆರೆ ಬಿದ್ದಂತಾಗಿದೆ.

ಮದುವೆ ಫೋಟೋ ಹಂಚಿಕೊಂಡ ಅನಿರುದ್ಧ್

ಮದುವೆಯ ಸಂಭ್ರಮದ ಕ್ಷಣಗಳನ್ನು ಅನಿರುದ್ಧ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಫೋಟೋಗಳ ಜೊತೆಗೆ "ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ, ಆದರೆ ಜೀವಮಾನವಿಡೀ ಜೊತೆಯಾಗಿರುವ ಸಂಗಾತಿ - 11.11" ಎಂದು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ನವಜೋಡಿಗೆ ಶುಭಾಶಯಗಳ ಮಳೆಗರೆಯುತ್ತಿದ್ದಾರೆ.

ಮದುವೆ ದಿರಿಸಿನಲ್ಲಿ ಮಿಂಚಿದ ನವಜೋಡಿ

ತಮ್ಮ ವಿಶೇಷ ದಿನದಂದು ಅನಿರುದ್ಧ್ ಮತ್ತು ಕಾವ್ಯಾ ರಾಜ-ರಾಣಿಯಂತೆ ಕಂಗೊಳಿಸಿದ್ದಾರೆ. ಅನಿರುದ್ಧ್ ದಂತ (ಐವರಿ)ದ ಬಣ್ಣದ ಕುರ್ತಾ, ಅದಕ್ಕೆ ಒಪ್ಪುವ ಪಂಚೆ ಹಾಗೂ ಸುಂದರ ಕಸೂತಿ ಕೆಲಸವಿರುವ ಉದ್ದನೆಯ ಜಾಕೆಟ್ ಧರಿಸಿ ಮಿಂಚಿದ್ದಾರೆ. ಇತ್ತ ಕಾವ್ಯಾ ಮಾರನ್, ಮಿನುಗುವ ತಿಳಿ ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟು, ಕುತ್ತಿಗೆಗೆ ಆಕರ್ಷಕ ನೆಕ್ಲೆಸ್​ ಮತ್ತು ಕಿವಿಯೋಲೆಗಳನ್ನು ಧರಿಸಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ನವೆಂಬರ್ 21 ರಂದು ಚೆನ್ನೈನಲ್ಲಿ ಗ್ರ್ಯಾಂಡ್ ರಿಸೆಪ್ಷನ್

ಗ್ರೀಸ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿರುವ ಈ ಜೋಡಿ, ನವೆಂಬರ್ 21 ರಂದು ಚೆನ್ನೈನಲ್ಲಿ ಅತ್ಯಂತ ಭವ್ಯವಾದ ಆರತಕ್ಷತೆ ಹಮ್ಮಿಕೊಂಡಿದೆ. ಕಾವ್ಯಾ ಅವರ ಪಾಲಕರಾದ ಕಲಾನಿತಿ ಮತ್ತು ಕಾವೇರಿ ಮಾರನ್ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಆಹ್ವಾನ ನೀಡಿದ ನಂತರ ಈ ದಿನಾಂಕ ಖಚಿತವಾಗಿದೆ.

ಈ ರಿಸೆಪ್ಷನ್‌ಗೆ ದೇಶದ ಅತಿರಥ ಮಹಾರಥರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮಿಳುನಾಡು ಸಿಎಂ ವಿಜಯ್​ ಹಾಗೂ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ರಾಜಕೀಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಿನಿಮಾ ಮತ್ತು ಕ್ರಿಕೆಟ್ ತಾರೆಯರ ಸಂಗಮ

ಚಿತ್ರರಂಗದಿಂದ ರಜನಿಕಾಂತ್, ಕಮಲ್ ಹಾಸನ್, ಎ.ಆರ್. ರೆಹಮಾನ್, ಧನುಷ್, ಅಜಿತ್ ಕುಮಾರ್ ದಂಪತಿ, ಅಲ್ಲು ಅರ್ಜುನ್ ದಂಪತಿ, ಶಿವಕಾರ್ತಿಕೇಯನ್ ದಂಪತಿ, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್, ಆಂಡ್ರಿಯಾ ಜೆರೆಮಿಯಾ, ಪ್ರಸನ್ನ ಹಾಗೂ ಸೂರಜ್ ವೆಂಜರಮೂಡು ಅವರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿಯಾಗಿರುವುದರಿಂದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸೇರಿದಂತೆ ಕ್ರಿಕೆಟ್ ಲೋಕದ ಹಲವು ತಾರೆಯರು ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ, (ಏಜೆನ್ಸೀಸ್​).