ಸಿನಿವಾಣಿ

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಸ್ತು ಅಂದ ಸಿಎಂ; ಯಾವಾಗ ನಡೆಯಲಿದೆ ಈ ಉತ್ಸವ?

ಬೆಂಗಳೂರು: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಇದೀಗ ತೆರೆದಿರುವ ಬೆನ್ನಲ್ಲೇ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಸುವ ಚರ್ಚೆಯೂ ಆರಂಭವಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಸಿನಿಮೋತ್ಸವ ನಡೆಸುವುದಕ್ಕೆ ಅನುಮತಿ ಪಡೆದಿದೆ.

ಸತತ 12 ವರ್ಷಗಳಿಂದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ವಿಶ್ವದ 5000 ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆದರೆ, ಅವುಗಳಲ್ಲಿ ಕೇವಲ 45 ಚಲನಚಿತ್ರೋತ್ಸವಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದೀಗ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಅದೇ ಹಿನ್ನೆಲೆಯಲ್ಲಿ ಈ ವರ್ಷ 13ನೇ ಚಲನಚಿತ್ರೋತ್ಸವ ನಡೆಸಲು ಅನುಮತಿ ಕೋರಲಾಗಿತ್ತು. ಫೆಬ್ರವರಿ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಚಲನಚಿತ್ರೋತ್ಸವ ನಡೆಸುವುದಾಗಿ ನಿಯೋಗ ತಿಳಿಸಿದೆ.

ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸುತ್ತದೆ. ಉಳಿದಂತೆ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳು ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜಯರಾಜ್, ಕಲಾ ನಿರ್ದೇಶಕ ಎನ್. ವಿದ್ಯಾಶಂಕರ್, ಚಿತ್ರನಟಿ ಶೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ, ಹಿರಿಯ ಪತ್ರಕರ್ತ ಮತ್ತು ಚಿತ್ರ ವಿಮರ್ಶಕ ಮುರಳೀಧರ್ ಖಜಾನೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಿ. ಹಿಮಂತರಾಜು ಅವರು ಈ ನಿಯೋಗದಲ್ಲಿದ್ದರು.