ಬೆಂಗಳೂರು: ರಸ್ತೆಯಲ್ಲಿ ಹೋಗುವಾಗ ಅಲ್ಲಲ್ಲಿ ಸ್ವಿಗ್ಗಿ-ಜೊಮ್ಯಾಟೋ ಡೆಲಿವರಿ ಹುಡುಗರು ಕಾಣಿಸುವುದು ಅಪರೂಪವೇನಲ್ಲ. ಆದರೆ ಇತ್ತೀಚೆಗೆ ಅಂಥ ಕೆಲವು ಡೆಲಿವರಿ ಬಾಯ್ಗಳಿಗೆ ಒಂದು ಅಪರೂಪದ ಅವಕಾಶ ಸಿಕ್ಕಿದೆ. ಅದೂ ರಸ್ತೆಯಲ್ಲಿ ತಮ್ಮೊಂದಿಗೆ ತಮ್ಮಂತೆಯೇ ಕೆಲಸ ಮಾಡುವ ಸಿನಿಮಾ ಹೀರೋ ಒಬ್ಬನನ್ನು ನೋಡುವ ಹಾಗೂ ಮಾತನಾಡಿಸುವುದಾಗಿತ್ತು.
ಹೌದು.. ಅವರಿಗೆ ಹೀಗೊಂದು ಅವಕಾಶ ಸಿಗಲು ಚಿತ್ರನಟರೊಬ್ಬರು ಸ್ವತಃ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಬೈಕ್ನಲ್ಲಿ ರಸ್ತೆಗೆ ಇಳಿದಿದ್ದೇ ಕಾರಣ. ಹೀಗೆ ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡ ನಟ ಬೇರಾರೂ ಅಲ್ಲ, ನೀನಾಸಂ ಸತೀಶ್. ಇದೇನು ಅವರು ಡೆಲಿವರಿ ಬಾಯ್ ಆಗಿದ್ದು, ಅಂಥದ್ದೇನಾಗಿತ್ತು ಎಂದು ಅಚ್ಚರಿ ಉಂಟಾದರೆ ಅದಕ್ಕೂ ಒಂದು ಕಾರಣವಿದೆ. ಅವರು ಹೀಗೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕಾಣಿಸಿಕೊಳ್ಳಲು ಕಾರಣ, 'ಪೆಟ್ರೊಮ್ಯಾಕ್ಸ್'.
ತಾವು ನಾಯಕರಾಗಿ ಅಭಿನಯಿಸಿರುವ 'ಪೆಟ್ರೊಮ್ಯಾಕ್ಸ್' ಚಿತ್ರ ಜುಲೈ 15ರಂದು ಬಿಡುಗಡೆ ಆಗಲಿದ್ದು, ಅದರ ಪ್ರಚಾರಾರ್ಥವಾಗಿ ಅವರು ಈ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಅವರು ಸ್ವಿಗ್ಗಿ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಅದೇ ರೀತಿ ತಮ್ಮ ಸಿನಿಮಾ ಪ್ರಮೋಟ್ ಮಾಡಿದ್ದಾರೆ. ಸ್ವಿಗ್ಗಿ ಬ್ಯಾಗ್ ಹಾಕಿಕೊಂಡು ಬೈಕ್ನಲ್ಲಿ ರಸ್ತೆಗಿಳಿದು ಮಾರ್ಗಮಧ್ಯೆ ಡೆಲಿವರಿ ಬಾಯ್ಗಳನ್ನು ಮಾತಾಡಿಸಿ ಅಚ್ಚರಿ ಮೂಡಿಸುತ್ತ, ಕೊನೆಗೆ ಆರ್ಡರ್ ಪಡೆದ ಹುಡುಗರೊಂದಿಗೆ ಸತೀಶ್ ಜೊತೆಯಾಗಿ ಹೋಗಿ ಮನೆಗೆ ಫುಡ್ ಪಾರ್ಸೆಲ್ ತಲುಪಿಸಿದ್ದಾರೆ.
'ನೀರ್ ದೋಸೆ' ಸಿನಿಮಾ ನಿರ್ದೇಶನ ಮಾಡಿದ್ದ ವಿಜಯಪ್ರಸಾದ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಜತೆಗೆ ಹರಿಪ್ರಿಯಾ, ಕಾರುಣ್ಯ ರಾಮ್ ಅಭಿನಯಿಸಿದ್ದಾರೆ. ನಾಲ್ವರ ಬದುಕಿನಲ್ಲಿ ಭರವಸೆಯ ಬೆಳಕು ಹೇಗೆ ಮೂಡುತ್ತದೆ ಎಂಬುದು ಚಿತ್ರದ ಕಥೆಯಾಗಿದ್ದು, ಅದನ್ನು ನಿರ್ದೇಶಕ ಪೆಟ್ರೊಮ್ಯಾಕ್ಸ್ ಉಪಮೆಯೊಂದಿಗೆ ಹೇಳಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್ ಮತ್ತು ಸ್ಟುಡಿಯೊ 10 ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ.