ಬೆಂಗಳೂರು: ಇನ್ಸ್ಟಾಗ್ರಾಂನಲ್ಲಿ ದಕ್ಷಿಣ ಭಾರತಕ್ಕೆ ರಶ್ಮಿಕಾ ನಂ.1 ಎಂಬ ಸುದ್ದಿ ಇತ್ತೀಚೆಗಷ್ಟೇ ಭಾರೀ ಸದ್ದು ಮಾಡಿತ್ತು. ಸ್ಟಾರ್ ಕಲಾವಿದರನ್ನೆಲ್ಲ ಹಿಂದಿಕ್ಕಿ ಟಾಪ್ ಪಟ್ಟ ಅಲಂಕರಿಸಿದ್ದರು ಕನ್ನಡದ ‘ಕಿರಿಕ್’ ಬೆಡಗಿ. ಇದೀಗ ಫೋರ್ಬ್ಸ್ ಸೌತ್ ಪಟ್ಟಿಯಲ್ಲಿಯೂ ರಶ್ಮಿಕಾ ಹವಾ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಪ್ರಭಾವಿಗಳಾಗಿರುವ ದಕ್ಷಿಣದ ತಾರೆಯರ ಪಟ್ಟಿಯಲ್ಲಿ ರಶ್ಮಿಕಾ 9.88 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ!
ಇತ್ತೀಚೆಗೆ ಫೋರ್ಬ್ಸ್ ಟಾಪ್ 30ರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ರಶ್ಮಿಕಾ ಮೊದಲಿದ್ದರೆ, ವಿಜಯ್ ದೇವರಕೊಂಡ 9.67 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಚಂದನವನದ ಸ್ಟಾರ್ ನಟ ಯಶ್ (9.54) ಮೂರನೇ ಸ್ಥಾನ, ಸಮಂತಾ (9.49) ನಾಲ್ಕನೇ ಸ್ಥಾನ, ಅಲ್ಲು ಅರ್ಜುನ್ (9.46) ಐದನೇ ಸ್ಥಾನ, ದುಲ್ಖರ್ ಸಲ್ಮಾನ್, ಪೂಜಾ ಹೆಗ್ಡೆ, ಪ್ರಭಾಸ್, ಸೂರ್ಯ, ತಮನ್ನಾ ಭಾಟಿಯಾ ಕ್ರಮವಾಗಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್ಗಳ ಇನ್ಸ್ಟಾಗ್ರಾಂ ಚಟುವಟಿಕೆಗಳನ್ನು ಆಧರಿಸಿ 30 ಪ್ರಭಾವಿ ತಾರೆಯರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟಾಲಿವುಡ್ ಮಂದಿಯೇ ದೊಡ್ಡ ಸಂಖ್ಯೆಯಲ್ಲಿದ್ದಾರೆ ಎನ್ನುವುದು ವಿಶೇಷ.