ಬೆಂಗಳೂರು: ಈ ಹಿಂದೆ ‘ಎಳೆಯರು ನಾವು ಗೆಳೆಯರು’ ಎಂಬ ಚಿತ್ರದ ಮೂಲಕ ನಿರ್ದೇಶಕರಾದ ನಟ ವಿಕ್ರಮ್ ಸೂರಿ, ಇದೀಗ ಸದ್ದಿಲ್ಲದೇ ‘ಚೌಕಾಬಾರ’ ಸಿನಿಮಾ ಶುರು ಮಾಡಿದ್ದಾರೆ. ಲಾಕ್ಡೌನ್ ಇಲ್ಲದಿದ್ದರೆ, ಈ ಚಿತ್ರ ಮುಗಿದು ಬಿಡುಗಡೆಯಾಗುತ್ತಿತ್ತೋ ಏನೋ? ಆದರೆ, ಲಾಕ್ಡೌನ್ನಿಂದ ನಿಂತಿದ್ದ ಚಿತ್ರದ ಕೆಲಸಗಳು, ಇದೀಗ ಪುನಃ ಪ್ರಾರಂಭವಾಗಿವೆ.
ಮಣಿ ಆರ್. ರಾವ್ ಅವರ ‘ಭಾವನ’ ಎಂಬ ಕಾದಂಬರಿಯನ್ನು ಮೂಲವಾಗಿಟ್ಟುಕೊಂಡು ‘ಚೌಕಾಬಾರ’ ಸಿನಿಮಾ ನಿರ್ದೇಶನದ ಜತೆಗೆ ನಿರ್ವಣವನ್ನೂ ಮಾಡುತ್ತಿದ್ದಾರೆ ವಿಕ್ರಮ್ ಸೂರಿ. ಪತ್ನಿ ನಮಿತಾ ರಾವ್ ಜತೆ ಸೇರಿಕೊಂಡು ನವ ನಿರ್ವಿುತಿ ಎಂಬ ಸಂಸ್ಥೆ ತೆರೆದು, ಸಂಸ್ಥೆಯ ಚೊಚ್ಚಲ ಚಿತ್ರವಾಗಿ ‘ಚೌಕಾಬಾರ’ ಸಿದ್ಧವಾಗುತ್ತಿದೆ. ಮೂರು ಹಾಡುಗಳಿಗೆ ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಡಾ.ಬಿ.ಆರ್. ಲಕ್ಷ್ಮಣ್ ರಾವ್ ಸಾಹಿತ್ಯ ಬರೆದಿದ್ದಾರೆ. ಇನ್ನೊಂದು ಹಾಡನ್ನು ವಿಕ್ರಮ್ ಸೂರಿ ಮತ್ತು ಹರೀಶ್ ಭಟ್ ಜತೆಯಾಗಿ ರಚಿಸಿದ್ದಾರೆ.
ಚೈತ್ರಾ, ವ್ಯಾಸರಾಜ್ ಸೋಸಲೆ, ಸಿದ್ಧಾರ್ಥ್, ನಕುಲ್ ಅಭಯಂಕರ್ ಹಾಗೂ ರಮ್ಯಾ ಭಟ್ ಧ್ವನಿ ನೀಡಿದ್ದಾರೆ. ಅಶ್ವಿನ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜನರೇಷನ್ ಗ್ಯಾಪ್ನ ಕಥೆ ಇದಾಗಿದ್ದು, ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು, ಮೂರು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.