ಸಿನಿವಾಣಿ

ಚೇತನ್ ಟಾಂಗ್ ಕೊಟ್ಟಿದ್ದು ಯಾರಿಗೆ? ... ಖಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ

chetannadiger

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ‘ಆ ದಿನಗಳು’ ಖ್ಯಾತಿಯ ಚೇತನ್ ಹೊಸ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಅವರು ಕನ್ನಡದ ಸ್ಟಾರ್ ನಟರೊಬ್ಬರಿಗೆ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಓ ಕುರಿತು ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ.

ಇಷ್ಟಕ್ಕೂ ಅವರು ಟಾಂಗ್ ಕೊಟ್ಟಿದ್ದು ಯಾರಿಗೆ? ನಟ ಧ್ರುವ ಸರ್ಜಾಗೆ ಎಂದು ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಕೆಲವು ದಿನಗಳ ಹಿಂದೆ ಧ್ರುವ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಎಂಬ ಹಾಡು ಬಿಡುಗಡೆಯಾಗಿತ್ತು. ಈ ಹಾಡು ಹೆಚ್ಚು ಹಿಟ್ಸ್ ಪಡೆಯುವುದರ ಜತೆಗೆ, ಸಾಕಷ್ಟು ಟೀಕೆಗೂ ಒಳಗಾಗಿತ್ತು. ಪ್ರಮುಖವಾಗಿ ರಶ್ಮಿಕಾ ಅವರನ್ನು ಧ್ರುವ ಎಳೆದಾಡುವುದು, ಕಿಚಾಯಿಸುವುದರ ಕುರಿತು ಟೀಕೆಗಳು ವ್ಯಕ್ತವಾಗಿತ್ತು. ಈಗ ‘ಆ ದಿನಗಳು’ ಚೇತನ್ ಸಹ ತಮ್ಮ ಟ್ವೀಟ್ ಮೂಲಕ ಧ್ರುವಗೆ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟಕ್ಕೂ ಚೇತನ್ ತಮ್ಮ ಟ್ವೀಟ್‌ನಲ್ಲಿ ಏನು ಹೇಳಿದ್ದಾರೆ ಗೊತ್ತಾ? ‘ಕನ್ನಡ ಚಲನಚಿತ್ರ ನಟರೊಬ್ಬರು ಮಹಿಳೆಯನ್ನು ಪದೇಪದೇ ‘ನಾಯಿ, ನರಿ, ಕ್ರಿಮಿ, ಕೀಟ’ ಎಂದು ಅನುಮೋದಿಸುತ್ತಾರೆ. ನಂತರ ಅವರು ಹಾಡೊಂದರಲ್ಲಿ ನಟಿಸುವಾಗ ಅಲ್ಲಿ ಪ್ರಣಯದ ಹೆಸರಿನಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ, ನಾಯಕಿಯನ್ನು ಕರೆಂಟ್ ಶಾಕ್ ಮತ್ತು ತುಂಡುತುಂಡಾಗಿ ಕತ್ತರಿಸುವ ಬೆದರಿಕೆ ಹಾಕುತ್ತಾರೆ. ಅಲ್ಲದೆ, ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಿಸುವುದು ‘ಕಿರುಕುಳ’. ನಿನ್ನೆ ಅವರು ಧಾರ್ಮಿಕತೆಯನ್ನು ವೈಭವೀಕರಿಸುವ ಮುಖೇನ ಅಂಬೇಡ್ಕರ್ ಜಯಂತಿ ಶುಭಾಶಯಗಳನ್ನು ಬರೆಯುತ್ತಾರೆ. ಖಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ ...’ ಎಂದು ಚೇತನ್ ಎಂಡ್ ಮಾಡಿದ್ದಾರೆ.

ಇಲ್ಲಿ ಚೇತನ್ ಯಾರ ಹೆಸರನ್ನು ಬಳಸದಿದ್ದರೂ, ಯಾವ ನಟರ ಬಗ್ಗೆಯೂ ಪಿನ್‌ಪಾಯಿಂಟ್ ಮಾಡದಿದ್ದರೂ, ಅವರು ಟಾಂಗ್ ಕೊಟ್ಟಿದ್ದು, ಧ್ರುವ ಸರ್ಜಾಗೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸರಿಯಾಗಿ, ಇತ್ತೀಚೆಗೆ ‘ಖರಾಬು’ ಹಾಡಿನಲ್ಲಿ ಧ್ರುವ ನಾಯಕಿಯನ್ನು ಸಾಕಷ್ಟು ಎಳೆದಾಡುವುದನ್ನು ತೋರಿಸಲಾಗಿದೆ. ಇನ್ನೂ ಒಂದು ವಿಷಯವೆಂದರೆ, ಅಂಬೇಡ್ಕರ್ ಜಯಂತಿಯಂದು ಧ್ರುವ ಸರ್ಜಾ ಶುಭ ಕೋರಿದ್ದರು. ಹಾಗಾಗಿ, ಚೇತನ್ ಈ ಟ್ವೀಟ್ ಮೂಲಕ ಧ್ರುವಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಚೇತನ್ ಅವರ ಈ ಟ್ವೀಟ್ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯುತ್ತದೋ ನೋಡಬೇಕು.