ಸಿನಿವಾಣಿ

ನನ್ನನ್ನು ಆತ್ಮಹತ್ಯೆಯ ಅಂಚಿಗೆ ದೂಡಿದ್ದರು ... ಚೇತನ್​ ಭಗತ್ ಆರೋಪ

ಬಾಲಿವುಡ್​ನಲ್ಲಿ ಬಲಾಢ್ಯರು ಹೇಗೆ ಮಿಕ್ಕವರನ್ನು ತುಳಿಯುತ್ತಿದ್ದಾರೆ ಎಂಬ ವಿಷಯ ಕಳೆದೊಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಈಗ ಜನಪ್ರಿಯ ಕಾದಂಬರಿಕಾರ ಚೇತನ್​ ಭಗತ್​ ಸಹ ಈ ವಿಷಯಕ್ಕೆ ಧ್ವನಿಗೂಡಿಸಿದ್ದಾರೆ.

ಇದುವರೆಗೂ ಹೊರಗಿನವರು-ಒಳಗಿನವರು, ಭಲಾಡ್ಯ-ದುರ್ಬಲರು ಎಂಬ ವಿಷಯಗಳ ಕುರಿತು ಚರ್ಚೆಯಾಗುತ್ತಿತ್ತು. ಇದೀಗ ಚೇತನ್​ ಭಗತ್​, ಇದಕ್ಕೊಂದು ಹೊಸ ಆಂಗಲ್​ ನೀಡಿದ್ದಾರೆ. ಕೆಲವು ಪ್ರಭಾವಿ ಚಿತ್ರ ವಿರ್ಮಶಕರು ಹೇಗೆ, ನಟ-ನಟಿಯರ ಜೀವನವನ್ನು ಹಾಳು ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜನಪ್ರಿಯ ನಿರ್ಮಾಪಕ-ನಿರ್ದೇಶಕ ವಿಧು ವಿನೋದ್​ ಚೋಪ್ರಾ, ಹೇಗೆ ತಮ್ಮನ್ನು ಆತ್ಮಹತ್ಯೆಯ ಅಂಚಿಗೆ ದೂಡಿದ್ದರು ಎಂಬುದನ್ನು ಸಹ ಅವರು ತಮ್ಮ ಟ್ವೀಟ್​ಗಳಲ್ಲಿ ಎತ್ತಿ ಹಿಡಿದಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಕುರಿತಾಗಿ ಟ್ವೀಟ್​ ಮಾಡಿರುವ ಅವರು, 'ಸುಶಾಂತ್​ ಅವರ ಕಡೆಯ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ವಿಮರ್ಶಕರಿಗೆ ನನ್ನ ಪ್ರಾರ್ಥನೆ ಒಂದೇ. ದಯವಿಟ್ಟು ಸ್ವಲ್ಪ ಸೆನ್ಸಿಬಲ್​ ಆಗಿ ಬರಿಯಿರಿ. ಈಗಾಗಲೇ ಸಾಕಷ್ಟು ಜನರ ಜೀವನ ಹಾಳು ಮಾಡಿದ್ದೀರಿ. ನಾವೆಲ್ಲಾ ನೀವು ನೋಡುತ್ತಿರುತ್ತೇವೆ' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಗರಂ ಆದ ಬಾಲಿವುಡ್​ನ ಜನಪ್ರಿಯ ವಿಮರ್ಶಕಿ ಮತ್ತು ನಿರ್ದೇಶಕ ವಿಧು ವಿನೋದ್​ ಚೋಪ್ರಾ ಅವರ ಪತ್ನಿ ಅನುಪಮಾ ಚೋಪ್ರಾ, ಚೇತನ್​ ಭಗತ್​ ಅವರ ಮಾತುಗಳನ್ನು ಖಂಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಚೇತನ್, 'ಮೇಡಂ, ನಿಮ್ಮ ಗಂಡ ಬಹಿರಂಗವಾಗಿ ನನ್ನ ವಿರುದ್ಧ ಆರೋಪಗಳನ್ನು ಮಾಡಿದರು. ನಾಚಿಕೆ ಇಲ್ಲದೆ, ನನಗೆ ಸಿಗಬೇಕಿದ್ದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ನನಗೆ ಸಿಗಬೇಕಿದ್ದ ಗೌರವ ಸಿಗಲೇ ಇಲ್ಲ. ಅಷ್ಟೇ ಅಲ್ಲ, ನನಗೆ ಕಿರುಕುಳ ನೀಡಿ, ಆತ್ಮಹತ್ಯೆಯ ಅಂಚಿಗೆ ದೂಡಿದರು. ಇದೆಲ್ಲವನ್ನೂ ನೀವು ನೋಡುತ್ತಿದ್ದಿರಿ. ಆಗ ಯಾಕೆ ಈ ಬಗ್ಗೆ ಧ್ವನಿ ಎತ್ತಲಿಲ್ಲ' ಎಂದು ಅವರು ಆರೋಪಿಸಿದ್ದಾರೆ.

ಚೇತನ್​ ಭಗತ್​ ಬರೆದ 'ಫೈವ್​ ಪಾಯಿಂಟ್​ ಸಮ್​ಒನ್​' ಎಂಬ ಕಾದಂಬರಿಯನ್ನು ಆಧರಿಸಿ ವಿಧು ವಿನೋದ್​ ಚೋಪ್ರಾ, 'ಥ್ರೀ ಈಡಿಯಟ್ಸ್​' ಚಿತ್ರ ಮಾಡಿದ್ದರು. ಚಿತ್ರ ಸೂಪರ್​ ಹಿಟ್​ ಏನೋ ಆಯಿತು. ಆದರೆ, ಚೇತನ್​ ಭಗತ್​ಗೆ ಸಿಗಬೇಕಾಗಿದ್ದ ಗೌರವ, ಕ್ರೆಡಿಟ್​ ಯಾವುದೂ ಸಿಗಲಿಲ್ಲ. ಈ ಕುರಿತು ಚೇತನ್​ ಭಗತ್​, ಚಿತ್ರ ಬಿಡುಗಡೆಯಾದಾಗಲೇ ಧ್ವನಿ ಎತ್ತಿದ್ದರು. ಈಗ ಸುಶಾಂತ್​ ಆತ್ಮಹತ್ಯೆ ಮತ್ತು ನೆಪೋಟಿಸಂ ಕುರಿತಾದ ಚರ್ಚೆಯಲ್ಲಿ, ಆ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂಬುದು ವಿಶೇಷ.