ಸಿನಿವಾಣಿ

ನಿನಗೆ ಗಿಣಿ ಅಂದ್ರೆ ಇಷ್ಟ, ಅದಕ್ಕೆ ಅದನ್ನೇ ದತ್ತು ಪಡೆದಿದ್ದೇನೆ; ‘ಸಂಚಾರಿ’ ನೆನಪಲ್ಲಿ ಚಕ್ರವರ್ತಿ ಚಂದ್ರಚೂಡ

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮರೆಯಾಗಿ ಕೆಲ ದಿನಗಳಾದವು. ಅವರ ಈ ಅನಿರೀಕ್ಷಿತ ಸಾವು ಸಾಕಷ್ಟು ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಆಪ್ತವಲಯ ಇನ್ನೂ ಆ ನೋವಿನಲ್ಲಿಯೇ ಕಾಲ ಕಳೆಯುತ್ತಿದೆ. ಈ ನಡುವೆ ಕಳೆದ ಒಂದು ದಶಕದಿಂದ ಸಂಚಾರಿ ವಿಜಯ್ ಜತೆಗೆ ಸ್ನೇಹ ಸಂಬಂಧ ಹೊಂದಿದ್ದ ಚಕ್ರವರ್ತಿ ಚಂದ್ರಚೂಡ, ಗೆಳೆಯನ ನೆನಪಿನಲ್ಲಿ ಗಿಳಿಯೊಂದನ್ನು ದತ್ತು ಪಡೆದಿದ್ದಾರೆ.

ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಕ್ರವರ್ತಿ, ‘ಸಂಚಾರಿ ವಿಜಯ್ ನಿನಗೆ ಗಿಳಿ ಅಂದ್ರೆ ಇಷ್ಟ. ಅದಕ್ಕೆ ನಿನ್ನ ಹೆಸರಿನಲ್ಲೊಂದು ತಗೊಂಡಿದ್ದೀನಿ.. ನೋಡಿ ಸ್ವಾಮಿ’ ಎಂದಿದ್ದಾರೆ. ಮೇಲೋಬ್ಬ ಮಾಯಾವಿ ಸಿನಿಮಾದಲ್ಲಿಯೂ ಸಂಚಾರಿ ವಿಜಯ್ ಜತೆಗೆ ಚಕ್ರವರ್ತಿ ಚಂದ್ರಚೂಡ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಿಂದ ಗಿಳಿಯನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಅಂದಹಾಗೆ, ಇತ್ತೀಚೆಗಷ್ಟೆ ನಟ ದರ್ಶನ್, ಮೃಗಾಲಯಗಳಲ್ಲಿನ ಪ್ರಾಣಿಗಳ ಸ್ಥಿತಿ ಕಂಡು, ದತ್ತು ಪಡೆಯುವಂತೆ ಮನವಿ ಮಾಡಿದ್ದರು. ಆ ಒಂದು ಮಾತಿಗೆ ಸಾವಿರಾರು ಮಂದಿ ಪ್ರಾಣಿ ದತ್ತು ಪಡೆದಿದ್ದರು. ಕೆಲವೇ ದಿನಗಳಲ್ಲಿ ರಾಜ್ಯದ 9 ಮೃಗಾಲಯಗಳಲ್ಲಿ 1 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿತ್ತು.