ಸಿನಿವಾಣಿ

'ಚಡ್ಡಿದೋಸ್ತ್​'ಗಳ ಹುಡುಗಾಟ, ತುಂಟಾಟ ...

ಬೆಂಗಳೂರು: ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ, 'ಚಡ್ಡಿದೋಸ್ತ್​ ಕಡ್ಡಿ ಅಲ್ಲಾಡುಸ್ಬುಟ್ಟ' ಎಂಬ ಚಿತ್ರವನ್ನು ಶುರು ಮಾಡಿದ್ದು ನೆನಪಿರಬಹುದು. ಈಗ ಆ ಚಿತ್ರವು ಮುಗಿದಿರುವುದಷ್ಟೇ ಅಲ್ಲ, ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಅದಕ್ಕೂ ಮುನ್ನ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರದ ಹಾಡುಗಳು ಸೋಮವಾರ ಸಂಜೆ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದಿದೆ. ಆವರಣದಲ್ಲಿ ನೆರವೇರಿತು. ಚಿತ್ರನಟಿ ಪ್ರೇಮಾ, ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಬಾ.ಮ. ಹರೀಶ್, ಬಾ.ಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಬಾರಿ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳುವುದಕ್ಕೆ ಹೊರಟಿದ್ದಾರಂತೆ ಆಸ್ಕರ್​ ಕೃಷ್ಣ. ಚಿತ್ರದ ಟೈಟಲ್​ ಕೊಟ್ಟಿರುವವರು ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಮಧ್ಯೆ ನಡೆಯುವ ಹುಡುಗಾಟ, ತುಂಟಾಟ ಈ ಚಿತ್ರದ ಕಥೆಯಂತೆ. 'ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ. ಈ ವಿಷಯವನ್ನು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ' ಎನ್ನುತ್ತಾರೆ ಆಸ್ಕರ್​ ಕೃಷ್ಣ.

ಲೋಕೇಂದ್ರ ಸೂರ್ಯ ಅವರ 'ಅಟ್ಟಯ್ಯ ಮತ್ತು ಹಂದಿ ಕಾಯೋಳು' ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಬಹಳ ಇಂಪ್ರೆಸ್​ ಆದರಂತೆ ಕೃಷ್ಣ. 'ಅವರನ್ನು ಕರೆಸಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು, ನಂತರ ಚಿತ್ರಕಥೆ ಮತ್ತು ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ಸೆವೆನ್‍ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸೆವೆನ್‍ರಾಜ್' ಎನ್ನುತ್ತಾರೆ ಕೃಷ್ಣ.

ನಿರ್ಮಾಪಕ ಸೆವೆನ್ ರಾಜ್ ಅವರ ಜೀವನದಲ್ಲಿ ಏಳು ಎಂಬ ಸಂಖ್ಯೆ ಬಹಳ ಪ್ರಮುಖ ಪಾತ್ರ ವಹಿಸಿದೆಯಂತೆ. 'ನಾನು ಹುಟ್ಟಿದ್ದು ಏಳನೇ ತಾರೀಖು. ನನ್ನ ತಂದೆಗೆ ನಾನು ಏಳನೇ ಮಗ. ನನ್ನ ಹೆಸರು ಕೂಡ ಸೆವೆನ್‍ರಾಜ್. ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ'ಎಂದು ಹೇಳಿದರು.

ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು ಅನಂತ್​ ಆರ್ಯನ್​ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಗೌರಿ ನಾಯರ್​ ನಟಿಸಿದ್ದಾರೆ. ಬೆಂಗಳೂರು, ತುಮಕೂರು, ಕುಣಿಗಲ್ ಮುಂತಾದ ಕಡೆ ಶೂಟಿಂಗ್ ಮಾಡಲಾಗಿದೆ.