ರಿಲೀಸ್​ ನೆಪದಲ್ಲಿ ಒತ್ತಡ ಹಾಕಿದ್ರೆ ಸರ್ಟಿಫಿಕೆಟ್​ ಇಲ್ಲ! ನಿರ್ಮಾಪಕರಿಗೆ ಟಫ್​ ರೂಲ್ಸ್​ ಮುಂದಿಟ್ಟ ಸೆನ್ಸಾರ್​ ಮಂಡಳಿ | Censor Board 
ಸಿನಿವಾಣಿ

ರಿಲೀಸ್​ ನೆಪದಲ್ಲಿ ಒತ್ತಡ ಹಾಕಿದ್ರೆ ಸರ್ಟಿಫಿಕೆಟ್​ ಇಲ್ಲ! ನಿರ್ಮಾಪಕರಿಗೆ ಟಫ್​ ರೂಲ್ಸ್​ ಮುಂದಿಟ್ಟ ಸೆನ್ಸಾರ್​ ಮಂಡಳಿ | Censor Board

ಬೆಂಗಳೂರು: ಸಿನಿಮಾ ರಿಲೀಸ್​ ದಿನಾಂಕ ಇನ್ನೇನು ಸಮೀಪಿಸುತ್ತಿದೆ ಎಂಬ ಕಾರಣ ನೀಡಿ, ಕೊನೆಯ ಕ್ಷಣದಲ್ಲಿ ಸೆನ್ಸಾರ್ ಸರ್ಟಿಫಿಕೇಟ್ ಕೊಡುವಂತೆ ಒತ್ತಡ ಹೇರುವ ಪ್ರವೃತ್ತಿಗೆ ಇದೀಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್​ಸಿ) ಕಡಿವಾಣ ಹಾಕಿದೆ.

ಈಗಾಗಲೇ ಬಿಡುಗಡೆ ದಿನಾಂಕಗಳನ್ನು ಘೋಷಿಸಿಬಿಟ್ಟಿದ್ದೇವೆ ಎಂಬ ನೆಪವೊಡ್ಡಿ ಮಂಡಳಿಯ ಮೇಲೆ ಒತ್ತಡ ಹೇರಬಾರದು ಮತ್ತು ನಿಯಮಗಳನ್ನು ಕಡೆಗಣಿಸಿ ಪ್ರಮಾಣೀಕರಣ ಪ್ರಕ್ರಿಯೆಯನ್ನು ಅವಸರದಲ್ಲಿ ಮುಗಿಸಿಕೊಡುವಂತೆ ಒತ್ತಾಯ ಹೇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ, ಸೆನ್ಸಾರ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ರಾಜೇಂದ್ರ ಸಿಂಗ್ ಅವರು, ನಿರ್ದಿಷ್ಟ ಮಾರ್ಗಸೂಚಿಗಳೊಂದಿಗೆ ಹೊಸ ಆದೇಶಗಳನ್ನು ಹೊರಡಿಸಿದ್ದಾರೆ.

ನಿರ್ಮಾಪಕರು ತಮ್ಮ ಇಚ್ಛೆಯಂತೆ ಬಿಡುಗಡೆಯ ದಿನಾಂಕಗಳನ್ನು ಘೋಷಿಸಿಕೊಂಡು, ನಂತರ ಕೆಲಸವನ್ನು ತಕ್ಷಣಕ್ಕೆ ಮುಗಿಸಿಕೊಡುವಂತೆ ಒತ್ತಾಯಿಸುವುದು ಸರಿಯಲ್ಲ. 'ಸಿನಿಮಾಟೋಗ್ರಾಫ್ ಕಾಯ್ದೆ' ಮತ್ತು 2024ರ ಇತ್ತೀಚಿನ ನಿಯಮಗಳ ಪ್ರಕಾರ, ನಿಗದಿತ ಸಮಯವನ್ನು ತೆಗೆದುಕೊಂಡು, ಸಂಪೂರ್ಣ ಪರಿಶೀಲನೆಯ ಬಳಿಕವೇ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಮಂಡಳಿ ಅಸಮಾಧಾನ

ಪೂರ್ಣಗೊಳಿಸದ ಪ್ರಿಂಟ್​ಗಳನ್ನು​ ಸಲ್ಲಿಸಿದರೆ, ಅವುಗಳನ್ನು ಕೂಡಲೇ ರಿಜೆಕ್ಟ್​ ಮಾಡಲಾಗುವುದು. ಪೋಸ್ಟ್-ಪ್ರೊಡಕ್ಷನ್ (ಚಿತ್ರೀಕರಣೋತ್ತರ) ಕೆಲಸಗಳು ನಡೆಯುತ್ತಿರುವಾಗಲೇ ಸೆನ್ಸಾರ್‌ಗೆ ಅರ್ಜಿ ಸಲ್ಲಿಸುವ ಕ್ರಮದ ಬಗ್ಗೆ ಮಂಡಳಿ ತೀರ ಅಸಮಾಧಾನ ವ್ಯಕ್ತಪಡಿಸಿದೆ. ಹಿನ್ನೆಲೆ ಸಂಗೀತ, ದೃಶ್ಯಾವಳಿ, ಸೌಂಡ್ ಮಿಕ್ಸಿಂಗ್, ಟೈಟಲ್​ ಕ್ರೆಡಿಟ್‌ಗಳು, ಸಬ್​ಟೈಟಲ್​ಗಳು ಸೇರಿದಂತೆ ಚಿತ್ರದ ಅಂತಿಮ ಪ್ರತಿಯನ್ನು ಅಂದರೆ ಫೈನಲ್ ಕಾಪಿಯನ್ನು ಮಾತ್ರ ಸೆನ್ಸಾರ್‌ಗೆ ಸಲ್ಲಿಸಬೇಕು ಎಂದು ಒತ್ತಿ ಹೇಳಿದೆ.

ಒಂದು ವೇಳೆ ಅರ್ಜಿಯೊಂದಿಗೆ ಪೂರ್ಣಗೊಳಿಸದ ಕೆಲಸದ ಕಾಪಿಗಳನ್ನು ಸಲ್ಲಿಕೆ ಮಾಡಿದರೆ, ಯಾವುದೇ ಮುಲಾಜಿಲ್ಲದೆ ಅವುಗಳನ್ನು ತಕ್ಷಣವೇ ತಿರಸ್ಕರಿಸಲಾಗುವುದು. ಅರ್ಜಿಯಲ್ಲಿ ಹೆಸರನ್ನು ಬರೆದ ಮಾತ್ರಕ್ಕೆ ಆ ಟೈಟಲ್​ ಅಂತಿಮಗೊಂಡಿದೆ ಎಂದರ್ಥವಲ್ಲ. ಸೆನ್ಸಾರ್ ಅರ್ಜಿಯಲ್ಲಿ ಒಂದು ಹೆಸರನ್ನು ಹಾಕಿದ ಮಾತ್ರಕ್ಕೆ, ಅದಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ ಎಂದುಕೊಳ್ಳುವುದು ತಪ್ಪು ಎಂದು ಮಂಡಳಿ ತಿಳಿಸಿದೆ.

ಪ್ರಮಾಣಪತ್ರ ಸಿಗುವ ಮುನ್ನವೇ

ಅಗತ್ಯವಿದ್ದರೆ ಸಿನಿಮಾದ ಟೈಟಲ್​ ಅನ್ನು ಬದಲಾಯಿಸುವ ಕಾನೂನು ಅಧಿಕಾರ ಪರಿಶೀಲನಾ ಸಮಿತಿಗೆ ಇದೆ. ಆದ್ದರಿಂದ, ಅಧಿಕೃತವಾಗಿ ಪ್ರಮಾಣಪತ್ರ ಸಿಗುವ ಮುನ್ನವೇ, ಹೆಸರನ್ನು ಅಂತಿಮ ಎಂದು ಭಾವಿಸಿ, ಚಿತ್ರದ ಪ್ರಚಾರ ಕಾರ್ಯವನ್ನು ಪ್ರಾರಂಭಿಸದಂತೆ ನಿರ್ಮಾಪಕರಿಗೆ ಸಲಹೆ ನೀಡಲಾಗಿದೆ. ಬಿಡುಗಡೆಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು, ಸಾಕಷ್ಟು ಸಮಯಾವಕಾಶ ಇರುವಂತೆಯೇ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಅದನ್ನು ಬಿಟ್ಟು ಕೊನೆಯ ಸಮಯದಲ್ಲಿ ಗಡಿಬಿಡಿಯಿಂದ ಮಾಡಿಕೊಡುವಂತೆ ಸೆನ್ಸಾರ್​ ಮಂಡಳಿ ಮೇಲೆ ಒತ್ತಾಯ ಹೇರುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

ಕೊನೆಯ ಕ್ಷಣದವರೆಗೂ ಕೆಲಸವನ್ನು ಎಳೆದುಕೊಂಡು ಹೋಗಿ, ಬಿಡುಗಡೆಯ ಸಮಯಕ್ಕೆ ಸರಿಯಾಗಿ ಪ್ರಮಾಣಪತ್ರ ಪಡೆಯುತ್ತಿದ್ದ ನಿರ್ಮಾಪಕರಿಗೆ ಸೆನ್ಸಾರ್​ ಮಂಡಳಿಯ ಈ ಹೊಸ ಹಾಗೂ ಕಟ್ಟುನಿಟ್ಟಿನ ನಿಯಮಗಳು ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).