ಚೆನ್ನೈ: ಮಲಯಾಳಂ ಬ್ಯೂಟಿ ನಜ್ರಿಯಾ ನಜೀಮ್ ( Nazriya Nazim ) ತಮ್ಮ ಸಹಜ ಅಭಿನಯ ಹಾಗೂ ಮುದ್ದಾದ ನೋಟದಿಂದಲೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಮಲಯಾಳಂ ಹಾಗೂ ತಮಿಳು ಸಿನಿಮಾಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಗೆದ್ದಿರುವ ನಜ್ರಿಯಾ, ಇದೀಗ ಸೂರ್ಯ ಅಭಿನಯದ ಬಹುನಿರೀಕ್ಷಿತ ತಮಿಳು ಸಿನಿಮಾ 'ಸೀನ್' (Scene) ಮೂಲಕ ಕಾಲಿವುಡ್ಗೆ ಭರ್ಜರಿ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಜೀತು ಮಾಧವನ್ ನಿರ್ದೇಶನದ ಈ ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಯಾಗಿದೆ.
ಇತ್ತೀಚೆಗೆ ದುಬೈನಲ್ಲಿ ಈ ಸಿನಿಮಾದ ಪ್ರಚಾರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಸೂರ್ಯ, ನಜ್ರಿಯಾ ನಜೀಮ್ ಹಾಗೂ ಯುವ ನಟ ನಸ್ಲೆನ್ ಸೇರಿದಂತೆ ಹಲವು ಪ್ರಮುಖ ತಾರೆಯರು ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಆದರೆ, ಈ ಈವೆಂಟ್ನಲ್ಲಿ ನಜ್ರಿಯಾ ಧರಿಸಿದ್ದ ಆಧುನಿಕ ಶೈಲಿಯ ಗೌನ್ (Gown) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ತೀವ್ರ ಟೀಕೆಗೆ ಗ್ರಾಸವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಸಭ್ಯವಾಗಿ ಉಡುಪು ಧರಿಸಬೇಕು ಎಂದು ಕೆಲ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಅಭಿಮಾನಿಗಳು ಹಾಗೂ ನೆಟ್ಟಿಗರ ಈ ಆಕ್ರೋಶಕ್ಕೆ ಮುಖ್ಯ ಕಾರಣವೆಂದರೆ, ಈ ಹಿಂದೆ ಧನುಷ್ ಅಭಿನಯದ 'ನಯ್ಯಂಡಿ' ಚಿತ್ರದ ಸಂದರ್ಭದಲ್ಲಿ ನಡೆದಿದ್ದ ಘಟನೆ. ಆ ಸಿನಿಮಾದ ಹಾಡೊಂದರಲ್ಲಿ ತಮ್ಮ ಹೊಟ್ಟೆಯ ಭಾಗವನ್ನು ತೋರಿಸಲಾಗಿದೆ ಮತ್ತು ಅದು ತಮ್ಮ ದೇಹದ ಭಾಗವಲ್ಲ, ನಿರ್ದೇಶಕರು ಡ್ಯೂಪ್ ಬಳಸಿ ಚಿತ್ರೀಕರಿಸಿದ್ದಾರೆ ಎಂದು ಆಕ್ಷೇಪಿಸಿ ನಿರ್ದೇಶಕರ ವಿರುದ್ಧ ನಜ್ರಿಯಾ ಪೊಲೀಸ್ ದೂರು ನೀಡಿದ್ದರು. "ಅಂದು ಹೊಟ್ಟೆ ತೋರಿಸಿದ್ದಕ್ಕೆ ಕೇಸ್ ಹಾಕಿದ್ದ ನಜ್ರಿಯಾ, ಇಂದು ದುಬೈ ಈವೆಂಟ್ನಲ್ಲಿ ಇಂತಹ ಉಡುಪು ಧರಿಸಿದ್ದಾರಲ್ಲ" ಎಂದು ನೆಟ್ಟಿಗರು ಹಳೆಯ ಘಟನೆಯನ್ನು ನೆನಪಿಸಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಜ್ರಿಯಾ ವಿರುದ್ಧ ಸಾಲು ಸಾಲು ನೆಗೆಟಿವ್ ಕಮೆಂಟ್ಗಳು ಹರಿದುಬರುತ್ತಿವೆ. "ನನ್ನ ಮನಸ್ಸಿನಲ್ಲಿದ್ದ ದೇವತೆಯ ಪ್ರತಿಮೆ ಇಂದು ಬಿದ್ದುಹೋಯಿತು", "ಮೊದಲು ಈ ವಿಡಿಯೋ ನೋಡಿದಾಗ ಇದು ಎಐ (AI) ಸೃಷ್ಟಿಸಿದ ಚಿತ್ರ ಇರಬಹುದು ಅಂದುಕೊಂಡಿದ್ದೆ, ನಂತರವೇ ಇದು ನಿಜವಾದ ವಿಡಿಯೋ ಎಂದು ಗೊತ್ತಾಯಿತು", "ಅಂದು ಹೊಟ್ಟೆ ತೋರಿಸಿದ್ದಕ್ಕೆ ಕೇಸ್ ಹಾಕಿದ್ದಕ್ಕೆ ಅರ್ಥವೇ ಇಲ್ಲದಂತಾಯಿತು" ಎಂದೆಲ್ಲ ನೆಟ್ಟಿಗರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಅವಕಾಶಗಳಿಗಾಗಿ ಹೀಗೆ ಮಾಡುತ್ತಿದ್ದಾರೆ ಎಂಬ ಸವೆದುಹೋದ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ.
ಆದರೆ, ಈ ಟೀಕೆಗಳ ನಡುವೆಯೂ ನಜ್ರಿಯಾ ಬೆಂಬಲಕ್ಕೆ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ನಿಂತಿದ್ದಾರೆ. "ಯಾರಿಗೆ ಯಾವ ಬಟ್ಟೆ ಧರಿಸಬೇಕು ಎಂಬುದು ಅವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ, ಅದರಲ್ಲಿ ಇತರರು ಮೂಗು ತೂರಿಸುವ ಅಗತ್ಯವಿಲ್ಲ" ಎಂದು ಫ್ಯಾನ್ಸ್ ಪ್ರತಿವಾದ ಮಾಡುತ್ತಿದ್ದಾರೆ. ನಜ್ರಿಯಾ ಅವರಿಗೆ ಅವಕಾಶಗಳಿಗಾಗಿ ಬಟ್ಟೆ ಬದಲಾಯಿಸುವ ಅಗತ್ಯವಿಲ್ಲ, ಅವರೇ ಸ್ವತಃ ಸಿನಿಮಾ ನಿರ್ಮಿಸುವಷ್ಟು ಶಕ್ತರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಎಲ್ಲಾ ವಿವಾದಗಳ ನಡುವೆ, 'ರೋಮಾಂಚಂ' ಮತ್ತು 'ಆವೇಶಂ' ಚಿತ್ರಗಳ ಮೂಲಕ ಪ್ರಸಿದ್ಧಿ ಪಡೆದ ಜೀತು ಮಾಧವನ್ ನಿರ್ದೇಶನದ 'ಸೀನ್' ಸಿನಿಮಾ ನವೆಂಬರ್ 6 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್).