ಬಾಗಲಕೋಟೆ: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಐದು ತಿಂಗಳು ಕಳೆದರೂ ಅವರ ಅಭಿಮಾನಿಗಳು ಮಾತ್ರ ಇನ್ನೂ ತಮ್ಮ ನೆಚ್ಚಿನ ನಟನ ಅಗಲಿಕೆ ನಿಜ ಎಂದು ನಂಬುತ್ತಿಲ್ಲ. ಅಪ್ಪು ಅವರ ನೆನಪಿನಲ್ಲಿಯೇ ಇರುವ ಅಭಿಮಾನಿಗಳು ಹಲವು ವಿಶೇಷ ಕೆಲಸಗಳ ಮೂಲಕ ನಟನಿಗೆ ವಿಶೇಷ ನಮನ ಸಲ್ಲಿಸುತ್ತಿದ್ದಾರೆ. ಇದೀಗ, 102 ಕವಿಗಳಿಂದ ಕವನಗಳನ್ನು ಸಂಗ್ರಹಿಸಿ, ಕರುನಾಡ ರಾಜರತ್ನನಿಗೆ ಕವಿ ನಮನ ಕವನ ಸಂಕಲನ ಮೂಲಕ ವಿಶೇಷವಾಗಿ ಗೌರವ ಸಲ್ಲಿಸುತ್ತಿದ್ದಾರೆ. ಇದರ ಜೊತಗೆ 'ರಾಜರತ್ನ ಗೀತ ನಮನ' ಎಂಬ ಧ್ವನಿ ಮುದ್ರಿಕೆಯನ್ನು ಹೊರತರಲು ರೆಡಿಯಾಗಿದ್ದಾರೆ ಒಬ್ಬರು. ಹೌದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಅಪ್ಪು ಅವರ ಕಟ್ಟಾಭಿಮಾನಿಯಾಗಿರುವ ಜೆ.ಡಿ.ದನ್ನೂರ್ ಹಾಗೂ ಅವರ ತಂಡ ಈ ಕೆಲಸಕ್ಕೆ ಕೈ ಹಾಕಿದ್ದಾರೆ.
ಈಗಾಗಲೇ, ರಾಜ್ಯದಲ್ಲಿನ ಮೈಸೂರು, ಕಲಬುರ್ಗಿ, ಬೆಂಗಳೂರು, ಮಂಡ್ಯ, ಕಾರವಾರ, ಗದಗ, ರಾಯಚೂರ್, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿರುವ 102 ಕವಿಗಳಿಂದ ನಟ ಪುನೀತ್ ರಾಜಕುಮಾರ್ ಅವರ ಬಗ್ಗೆ ಬರೆದ ಕವನಗಳನ್ನು ಸಂಗ್ರಹಿಸಲಾಗಿದೆ. ಹಾಗೂ, ಈ ಕವನಗಳನ್ನು 'ರಾಜರತ್ನ ಕವಿ ನಮನ' ಕವನ ಸಂಕಲನದಲ್ಲಿ ಸಂಗ್ರಹಿಸಿ, 5 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಇನ್ನು ಅವುಗಳನ್ನು ಅಪ್ಪು ಅವರ ಅಪ್ಪಟ ಅಭಿಮಾನಿಗಳಿಗೆ ಹಂಚಲಿದ್ದಾರೆ. ಅಂದಹಾಗೆ, ಈ ಕವನ ಸಂಕಲನವನ್ನು ಪುನೀತ್ ಅಭಿಮಾನಿಗಳಿಗೆ ಉಚಿತವಾಗಿ ನೀಡಲಿರುವುದು ಇಲ್ಲಿನ ವಿಶೇಷ ಸಂಗತಿಯಾಗಿದೆ. ಹಾಗೆಯೇ, ನಟ ಪುನೀತ್ ಅಭಿಮಾನಿಗಳ ಜೊತೆ ನಮ್ಮ ನಾಡಿನ ಗ್ರಂಥಾಲಯಕ್ಕೆ ಸಹ ಉಚಿತವಾಗಿ ಈ ಕವನ ಸಂಕಲನ ಕೊಡಲಾಗುತ್ತೆ.
ಈ ಕವನ ಸಂಕಲನದ ಪ್ರತಿ ಪುಟದಲ್ಲೂ ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನವಾದ ಒಂದು ಭಾವಚಿತ್ರ ಇರುವುದು ಗಮನಾರ್ಹ. ಅಷ್ಟೇ ಅಲ್ಲ, ಕವನ ಸಂಕಲನದ ಜೊತೆಗೆ ಅಪ್ಪು ಅವರ ಬಗೆಗಿನ ಎಂಟು ಗೀತೆಗಳನ್ನು ಬಿಡುಗಡೆ ಮಾಡಲಿದ್ದಾರಂತೆ. ಇನ್ನು, ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಚ್ 30 ರಂದು ರಾಜರತ್ನ ಕವಿ ನಮನ ಕವನ ಸಂಕಲನ ಬಿಡುಗಡೆ ಮತ್ತು ಗೀತ ನಮನ ಕೂಡಾ ರಿಲೀಸ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಡಾ.ಜಯಮಾಲಾ ಅವರು ಕವನ ಸಂಕಲನ ಹಾಗೂ ಹಾಡುಗಳನ್ನು ರಿಲೀಸ್ ಮಾಡಲಿದ್ದು, ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮನು ಬಳಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ.