ಸಿನಿವಾಣಿ

ಪುನೀತ್​ ಅಭಿಮಾನಿಯಾಗಿ ಪ್ರಮೋದ್​ ... ಬಾಂಡ್​ ರವಿಗೆ ಜತೆಯಾದ ಧ್ರುವ, ವಿನೋದ್​

chetannadiger

ಬೆಂಗಳೂರು: ಬಾಂಡ್​ ರವಿ ಎಂದರೆ ನೆನಪಾಗುವುದು ಪುನೀತ್​ ರಾಜಕುಮಾರ್​. ಸೂರಿ ನಿರ್ದೇಶನದ "ಅಣ್ಣಾ ಬಾಂಡ್​' ಚಿತ್ರದಲ್ಲಿ ಪುನೀತ್​, ಬಾಂಡ್​ ರವಿಯಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನ ಚಿತ್ರವೊಂದು ಶುರುವಾಗಿದ್ದು, ಅದರಲ್ಲಿ "ಪ್ರೀಮಿಯರ್​ ಪದ್ಮಿನಿ' ಖ್ಯಾತಿಯ ಪ್ರಮೋದ್​, "ಬಾಂಡ್​ ರವಿ'ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ವಿನೋದ್​ ಪ್ರಭಾಕರ್​ ಮತ್ತು ಧ್ರುವ ಸರ್ಜಾ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವನ್ನು ಪ್ರಜ್ವಲ್​ ನಿರ್ದೇಶನ ಮಾಡಿದರೆ, ಈ ಹಿಂದೆ "ಮಾದ ಮತ್ತು ಮಾನಸಿ' ಚಿತ್ರ ನಿರ್ಮಿಸಿದ್ದ ನರಸಿಂಹಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅಪ್ಪು ಸಾರ್​ ಅಭಿಮಾನಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಮಾತು ಶುರು ಮಾಡಿದ ಪ್ರಮೋದ್​, ""ಅಣ್ಣಾ ಬಾಂಡ್​' ಚಿತ್ರದಲ್ಲಿ ಅಪ್ಪು ಸಾರ್​ ಮಾಡಿದ್ದ ಬಾಂಡ್​ ರವಿ ಪಾತ್ರದ ತರಹವೇ ನನ್ನ ಪಾತ್ರವೂ ಇರುತ್ತದೆ. ಹಾಗಾಗಿ ಅವರ ಮ್ಯಾನರಿಸಂ, ನಟನಾ ಶೈಲಿಯನ್ನು ನೋಡಿ ಕಲಿಯುತ್ತಿದ್ದೇನೆ' ಎನ್ನುತ್ತಾರೆ.

ಪ್ರಮೋದ್​ಗೆ ನಾಯಕಿಯಾಗಿ ಕಾಜಲ್​ ಕುಂದರ್​ ನಟಿಸುತ್ತಿದ್ದು, ಕಾಜಲ್​ ಈ ಹಿಂದೆ "ಮಾಯಾಕನ್ನಡಿ' ಎಂಬ ಚಿತ್ರದಲ್ಲಿ ನಟಿಸಿದ್ದರು. ರವಿ ಕಾಳೆ, ಧರ್ಮ, ವಿಜಯ್​ ಚೆಂಡೂರ್​, ಶೋಭರಾಜ್​ ಮುಂತಾದವರು ಚಿತ್ರದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ಮತ್ತು ಕೆ.ಎಸ್​. ಚಂದ್ರಶೇಖರ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.