ಮುಂಬೈ: ಬಾಲಿವುಡ್ ಸಿನಿಮಾ ಮಂದಿ ಮಾತ್ರವಲ್ಲದೇ ಇಡೀ ದೇಶವೇ ಬೆಚ್ಚಿಬೀಳುವಂತಹ ಆಘಾತಕಾರಿ ಸುದ್ದಿ ಹೊರಬಂದಿದೆ. ಖ್ಯಾತ ನಟ ಟೈಗರ್ ಶ್ರಾಫ್ ( Tiger Shroff ) ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಭೀಕರ ಹತ್ಯೆಯತ್ನ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಟೈಗರ್ ಶ್ರಾಫ್ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸ ವಿಡಿಯೋಗಳು ಮತ್ತು ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಫುಟ್ಬಾಲ್ ಮೈದಾನದಿಂದ ತಮ್ಮ ಬಿಎಂಡಬ್ಲ್ಯು ಸೆಡಾನ್ ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಕಾರಿನ ಮುಂಭಾಗದ ಗ್ಲಾಸ್ ಹಾಗೂ ಸೈಡ್ ಕಿಟಕಿಯ ಮೇಲೆ ನೇರವಾಗಿ ಗುಂಡು ಹಾರಿಸಿದ್ದಾರೆ. ಈ ಹತ್ಯೆಯತ್ನದ ಸಂಪೂರ್ಣ ದೃಶ್ಯಗಳು ಹೊಸ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಸೆರೆಸಿಕ್ಕಿದ್ದು, ಬಾಲಿವುಡ್ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ದಾಳಿಕೋರರು ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಒಟ್ಟು ಐದು ಸುತ್ತುಗಳ ಗುಂಡುಗಳನ್ನು ಹಾರಿಸಿದ್ದಾರೆ. ಆದರೆ, 6ನೇ ಹಾಗೂ ಅಂತಿಮ ಸುತ್ತಿನ ಗುಂಡು ಹಾರಿಸಲು ಕಾರಿನ ಹತ್ತಿರ ಬಂದಾಗ ದುಷ್ಕರ್ಮಿಯ ಬಂದೂಕು (ಗನ್) ಅನಿರೀಕ್ಷಿತವಾಗಿ ಜ್ಯಾಮ್ ಆಗಿದೆ. ಈ ತಾಂತ್ರಿಕ ದೋಷದಿಂದಾಗಿ ಟೈಗರ್ ಶ್ರಾಫ್ ಮತ್ತಷ್ಟು ಅಪಾಯದಿಂದ ಬಚಾವ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳಲ್ಲೂ ಸಹ ಶೂಟರ್ ಹತ್ತಿರದಿಂದ ಗುಂಡು ಹಾರಿಸಲು ಯತ್ನಿಸುತ್ತಿರುವಾಗ ಗನ್ ಕೈಕೊಟ್ಟಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ದಾಳಿಯ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ಡ್ರೈವರ್ ಫಿರ್ದೌಸ್ ಅವರಿಗೆ ಗಾಯಗಳಾಗಿದ್ದು, ದಾಳಿಕೋರರು ಮೂರನೇ ವ್ಯಕ್ತಿ ಸಿದ್ಧಪಡಿಸಿಟ್ಟಿದ್ದ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಈ ಕೇವಲ 18 ಸೆಕೆಂಡುಗಳ ವಿಡಿಯೋದಲ್ಲಿ ಡ್ರೈವರ್ ಗಾಯಗೊಂಡು ಕಾರಿನಿಂದ ಓಡಿಹೋಗುವುದು ಮತ್ತು ದಾಳಿಕೋರರು ಬೈಕ್ನಲ್ಲಿ ಪರಾರಿಯಾಗುವ ದೃಶ್ಯಗಳಿವೆ. ಮುಂಬೈ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಂದು 14 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ ಘಟನೆಯ ಸಂಪೂರ್ಣ ಕ್ರಮಾಂಕ ಬಹಿರಂಗಗೊಂಡಿದೆ. ಟೈಗರ್ ಶ್ರಾಫ್ ಕಾರಿನ ಮುಂಭಾಗದ ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮೂವರು ಬೈಕ್ನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಡ್ರೈವರ್ ಫಿರ್ದೌಸ್ ಗಾಯಗೊಂಡ ತಕ್ಷಣ, ಸುತ್ತಮುತ್ತಲಿನ ಜನರು "ಬಹುತ್ ಗಲತ್ ಹೋ ಗಯಾ ಯೇ!" ( ತುಂಬಾ ದೊಡ್ಡ ಅನ್ಯಾಯ/ತಪ್ಪು ನಡೆದುಹೋಯಿತು) ಎಂದು ಕಿರುಚಾಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಟೈಗರ್ ಶ್ರಾಫ್ ತಕ್ಷಣವೇ ಪ್ಯಾಸೆಂಜರ್ ಸೀಟಿನಿಂದ ಡ್ರೈವಿಂಗ್ ಸೀಟಿಗೆ ಜಿಗಿದು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ.
ಕಾರು ಹಾಗೂ ರಸ್ತೆಯ ಮೇಲೆ ರಕ್ತದ ಕಲೆಗಳು ಸ್ಪಷ್ಟವಾಗಿ ಗೋಚರಿಸಿದ್ದು, ಸ್ಥಳದಲ್ಲಿದ್ದ ಓರ್ವ ಮಹಿಳೆ, ನಟ ಟೈಗರ್ ಶ್ರಾಫ್ಗೆ "ಜಲ್ದಿ ಲೇಕೆ ಜಾವೋ, ಟೈಗರ್" ( ಬೇಗ ಕರೆದುಕೊಂಡು ಹೋಗಿ ) ಎಂದು ಗಾಯಗೊಂಡ ಡ್ರೈವರ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅದೃಷ್ಟವಶಾತ್ ಟೈಗರ್ ಶ್ರಾಫ್ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಈ ಗುಂಡಿನ ದಾಳಿಯಲ್ಲಿ ಡ್ರೈವರ್ ಸೇರಿದಂತೆ ಮತ್ತೊಬ್ಬ ಸ್ಥಳೀಯ ವ್ಯಕ್ತಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕೃತ್ಯದ ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಕೈವಾಡವಿರುವುದು ಅಧಿಕೃತವಾಗಿ ದೃಢಪಟ್ಟಿದೆ. ನಟ ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ ಶ್ರಾಫ್ ಹೊಂದಿರುವ ಒಡನಾಟವೇ ಈ ದಾಳಿಗೆ ಕಾರಣವೆಂದು ಗ್ಯಾಂಗ್ ಬೆದರಿಕೆ ಹಾಕಿದೆ. ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬಂದಿರುವ ಆಡಿಯೋ ಕ್ಲಿಪ್ನಲ್ಲಿ, ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಟೈಗರ್ ಶ್ರಾಫ್ ತಮ್ಮ ಹಿಟ್ಲಿಸ್ಟ್ನಲ್ಲಿದ್ದರು ಎಂದು ಅನಿಲ್ ಪಂಡಿತ್ ಎಂಬಾತ ಹೇಳಿಕೊಂಡಿದ್ದಾನೆ. ಸಲ್ಮಾನ್ ಖಾನ್ ಆಪ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ಬೆದರಿಕೆಗಳು ಮತ್ತು ದಾಳಿಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ, (ಏಜೆನ್ಸೀಸ್).