ಮುಂಬೈ: ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ನಲ್ಲಿ ಅಂತರಧರ್ಮೀಯ ವಿವಾಹಗಳು ಹೊಸತೇನಲ್ಲ. 60, 70 ರ ದಶಕಗಳಿಂದ ಹಿಡಿದು ಇಲ್ಲಿಯವರೆಗೆ ಅನೇಕ ತಾರೆಗಳು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅನೇಕ ಧರ್ಮಗಳಲ್ಲಿ ವಿವಾಹ ವಿನಿಮಯ ಮಾಡಿಕೊಂಡಿದ್ದಾರೆ.
ಬಾಲಿವುಡ್ನ ಅಂತರಧರ್ಮೀಯ ವಿವಾಹಗಳಲ್ಲಿ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮದುವೆ ಕೂಡ ಒಂದಾಗಿದೆ. ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ದಶಕಗಳೇ ಕಳೆದಿದೆ. ಆದರೆ, ಇತ್ತೀಚೆಗೆ ಇಸ್ಲಾಂ ಧರ್ಮಗುರು ಒಬ್ಬರು, ಈ ಜೋಡಿಯ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ (AIIO) ಮುಖ್ಯಸ್ಥ ಡಾ. ಉಮರ್ ಅಹ್ಮದ್ ಇಲ್ಯಾಸಿ ಅಂತರಧರ್ಮೀಯ ವಿವಾಹ ಮತ್ತು ಇಸ್ಲಾಮಿಕ್ ಶರಿಯಾ ಕಾನೂನಿನ ಕುರಿತು ನೀಡಿರುವ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ವಿಶೇಷ ಸಂವಾದದಲ್ಲಿ ಡಾ. ಉಮರ್ ಅಹ್ಮದ್ ಇಲ್ಯಾಸಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಅಂತರಧರ್ಮೀಯ ವಿವಾಹ ಮತ್ತು ಮತಾಂತರದ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಇದೇ ಸಂದರ್ಭದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮದುವೆಯ ವಿಷಯವೂ ಪ್ರಸ್ತಾಪವಾಯಿತು.
ಶಾರುಖ್ ಖಾನ್ ಮುಸ್ಲಿಂ ಆಗಿದ್ದು, ಗೌರಿ ಖಾನ್ ಹಿಂದೂ ಪಂಜಾಬಿ ಕುಟುಂಬಕ್ಕೆ ಸೇರಿದವರು. ಮದುವೆಯ ನಂತರವೂ ಗೌರಿ ತಮ್ಮ ಧರ್ಮವನ್ನು ಬದಲಾಯಿಸಿಕೊಂಡಿಲ್ಲ. ಹೀಗಿರುವಾಗ ಶರಿಯಾ ಕಾನೂನಿನ ಪ್ರಕಾರ ಇವರ ಮದುವೆ ಮಾನ್ಯವಾಗಿದೆಯೇ? ಎಂದು ನಿರೂಪಕರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಾ. ಇಲ್ಯಾಸಿ, ನನ್ನ ತಿಳುವಳಿಕೆಯ ಪ್ರಕಾರ, ಒಬ್ಬ ಮುಸ್ಲಿಂ ಪುರುಷನು ಯಹೂದಿ ಅಥವಾ ಕ್ರಿಶ್ಚಿಯನ್ ಧರ್ಮದ ಮಹಿಳೆಯನ್ನು ಆಕೆ ಮತಾಂತರಗೊಳ್ಳದೆಯೇ ಮದುವೆಯಾಗಬಹುದು. ಆದರೆ ಹಿಂದೂ ಸೇರಿದಂತೆ ಇತರೆ ಧರ್ಮದ ಮಹಿಳೆಯರ ವಿಚಾರದಲ್ಲಿ ನಿಯಮ ಬೇರೆ ಇದೆ ಎಂದರು.
ಶಾರುಖ್-ಗೌರಿ ಮದುವೆಯ ಬಗ್ಗೆ ನೇರವಾಗಿ ಮಾತನಾಡಿದ ಅವರು, ಶರಿಯಾ ನಿಯಮಗಳ ಪ್ರಕಾರ ಮದುವೆಯಾಗಲು ಹುಡುಗ ಮತ್ತು ಹುಡುಗಿ ಇಬ್ಬರೂ ಮುಸ್ಲಿಮರಾಗಿರಬೇಕು. ಹೀಗಾಗಿ ಶರಿಯಾ ಕಾನೂನು ಈ ಮದುವೆಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶರಿಯಾ ನಿಯಮಗಳನ್ನು ಪಾಲಿಸದ ವ್ಯಕ್ತಿಯನ್ನು ಮುಸ್ಲಿಂ ಎಂದು ಪರಿಗಣಿಸಬಹುದೇ ಎಂಬ ಮುಂದಿನ ಪ್ರಶ್ನೆಗೆ ಡಾ. ಇಲ್ಯಾಸಿ ಬಹಳ ಸೂಕ್ಷ್ಮವಾಗಿ ಉತ್ತರಿಸಿದರು. "ಶರಿಯಾ ನಿಯಮ ಉಲ್ಲಂಘಿಸಿದರೆ ಅದಕ್ಕೆ ತಕ್ಕ ಪರಿಣಾಮ ಅಥವಾ ಶಿಕ್ಷೆ ಇರುತ್ತದೆ. ಆದರೆ, ಒಬ್ಬ ವ್ಯಕ್ತಿ ಮುಸ್ಲಿಂ ಹೌದೋ ಅಲ್ಲವೋ ಎಂದು ಸರ್ಟಿಫಿಕೇಟ್ ನೀಡುವ ಅಧಿಕಾರ ನನಗಿಲ್ಲ. ಅದು ದೇವರಿಗೂ ಮತ್ತು ಆ ವ್ಯಕ್ತಿಗೂ ನಡುವಿನ ವಿಚಾರ. ಸರ್ವಶಕ್ತ ಮತ್ತು ಆತನ ಸೇವಕನ ನಡುವಿನ ಸಂಬಂಧವದು" ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ, (ಏಜೆನ್ಸೀಸ್).