ರಾಣಿ ಮುಖರ್ಜಿ ತಾಯಿ ಕೃಷ್ಣಾ ಮುಖರ್ಜಿ 
ಬಾಲಿವುಡ್

ಬಾಲಿವುಡ್​​ ನಟಿಗೆ ಮಾತೃ ವಿಯೋಗ: ರಾಣಿ ಮುಖರ್ಜಿ ತಾಯಿ ಕೃಷ್ಣಾ ಮುಖರ್ಜಿ ನಿಧನ; ಖಾಸಗಿತನಕ್ಕೆ ಗೌರವಿಸುವಂತೆ ಮನವಿ! Krishna Mukerji

ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ತಾಯಿ ಕೃಷ್ಣಾ ಮುಖರ್ಜಿ (Krishna Mukerji) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕುಟುಂಬದ ಖಾಸಗಿತನಕ್ಕೆ ಗೌರವಿಸುವಂತೆ ಆಪ್ತರು ಮನವಿ ಮಾಡಿದ್ದಾರೆ. ಸಂಪೂರ್ಣ ಸುದ್ದಿ ಇಲ್ಲಿದೆ.

ಮುಂಬೈ: ಬಾಲಿವುಡ್​​ನ ಖ್ಯಾತ ನಟಿ, ನಿರ್ಮಾಪಕಿ ರಾಣಿ ಮುಖರ್ಜಿ ತಾಯಿ ಹಾಗೂ ಹಿನ್ನಲೆ ಗಾಯಕಿಯಾಗಿದ್ದ ಕೃಷ್ಣಾ ಮುಖರ್ಜಿ (Krishna Mukerji) [75] ಇಂದು ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ.

ಬಂಗಾಳಿ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಕೊಂಡಿದ್ದ ಕೃಷ್ಣಾ ಮುಖರ್ಜಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದ್ದು, ಇಂದು ಅವರು ನಿಧನರಾಗಿದ್ದಾರೆಂದು ಕುಟುಂಬ ವರ್ಗ ಮಾಹಿತಿಯನ್ನು ಹಂಚಿಕೊಂಡಿದೆ.

ಖಾಸಗೀತನಕ್ಕೆ ಗೌರವವಿರಲಿ!

ರಾಣಿ ಮುಖರ್ಜಿ ತಾಯಿ ಕೃಷ್ಣಾ ಮುಖರ್ಜಿ ಸಾವನ್ನು ದೃಢಪಡಿಸಿ, ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಯಶ್​ ರಾಜ್​ ಫಿಲ್ಮ್ಸ್​ (YRF) " ರಾಣಿ ಮುಖರ್ಜಿ ಅವರ ತಾಯಿ ಶ್ರೀಮತಿ ಕೃಷ್ಣಾ ಮುಖರ್ಜಿ ಅವರು ಇಂದು ಮಧ್ಯಾಹ್ನ ನಿಧನಹೊಂದಿದ್ದಾರೆಂದು ಭಾರವಾದ ಹೃದಯದೊಂದಿಗೆ ತಿಳಿಸುತ್ತಿದ್ದೇವೆ. ನಿಮ್ಮ ಪ್ರೀತಿ, ಪ್ರಾಥನೆ ಮತ್ತು ಬೆಂಬಲಕ್ಕೆ ಕುಟುಂಬ ವರ್ಗ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಈ ದುಃಖದ ಸಂದರ್ಭದಲ್ಲಿ ಕುಟುಂಬವು ಏಕಾಂತವನ್ನು ಬಯಸುತ್ತಿದ್ದು, ದಯವಿಟ್ಟು ಖಾಸಗಿತನಕ್ಕೆ ಗೌರವವನ್ನು ನೀಡಿ" ಎಂದು ಕೇಳಿಕೊಂಡಿದ್ದಾರೆ.

ಯಾರು ಈ ಕೃಷ್ಣಾ ಮುಖರ್ಜಿ?

ಕೃಷ್ಣಾ ಮುಖರ್ಜಿ ಇವರು ಹಿಂದಿ ಹಾಗೂ ಬಂಗಾಳಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಕೆಲ ಸಿನಿಮಾಗಳಲ್ಲಿ ಹಿನ್ನಲೆ ಗಾಯಕಿಯಾಗಿ ಕಲಾಸೇವೆಯನ್ನು ಮೆರೆದಿದ್ದರು. ಮೋಮರ್ ಅಲೋ, ಹೈವಾನ್, ತೀಸ್ರಿ ಆಂಖ್ ಮತ್ತು ತೋಮರ್ ರಕ್ತೆ ಅಮರ್ ಸೊಹಾಗ್ ಮೊದಲಾದ ಸಿನಿಮಾಗಳಲ್ಲಿರುವ ಹಾಡುಗಳನ್ನು ಕೃಷ್ಣಾ ಮುಖರ್ಜಿ ಹಾಡಿದ್ದರು.

ನಂತರ, ಫಿಲ್ಮಲಯಾ ಸ್ಟುಡಿಯೋಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಚಲನಚಿತ್ರ ನಿರ್ಮಾಪಕ ರಾಮ್ ಮುಖರ್ಜಿ ಅವರನ್ನು 1972 ರಲ್ಲಿ ಕೃಷ್ಣಾ ಮುಖರ್ಜಿ ಮದುವೆಯಾಗಿ ರಾಜಾ ಮುಖರ್ಜಿ ಹಾಗೂ ರಾಣಿ ಮುಖರ್ಜಿ ಎಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. 2017 ರಲ್ಲಿ ಪತಿ ರಾಮ್ ಮುಖರ್ಜಿ ನಿಧನವೊಂದಿದ್ದರು.

ಸಿನಿಮಾರಂಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೂ, ಕೃಷ್ಣಾ ಮುಖರ್ಜಿ ಕ್ಯಾಮರಾ ಕಣ್ಣುಗಳಿಗೆ ಕಡಿಮೆಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕೊಲ್ಕತಾದಲ್ಲಿ ರಾಣಿ ಮುಖರ್ಜಿ ನಡೆಸುವ ಕಾಳಿ ದೇವಿಯ ಪೂಜೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ಕೃಷ್ಣಾ ಮುಖರ್ಜಿ, ಮಗಳು ರಾಣಿ ಜೊತೆಗೆ ಉತ್ತಮ ಹಾಗೂ ಅನೋನ್ಯ ಸಂಬಂಧವನ್ನು ಹೊಂದಿದ್ದರು, (ಏಜೆನ್ಸೀಸ್​).