Ramayana Song: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟೀಸರ್, ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಕಲ್ಪನೆಗೂ ಮೀರಿದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ನಟನೆ ಮತ್ತು ತೆರೆಯ ಮೇಲಿನ ಖಳನಾಯಕನ ಖದರ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದು, ಇನ್ನೇನು ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗ ಹೊಸ ವಿವಾದವೊಂದು ಭುಗಿಲೆದ್ದಿದೆ.
ಬಿಗ್ ಬಜೆಟ್ 'ರಾಮಾಯಣ' ಸಿನಿಮಾದ 'ಮಂಗಳ ರಂಗ್' ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಮತ್ತು ಟೀಕೆಗಳಿಗೆ ಗ್ರಾಸವಾಗಿದೆ. ಆಸ್ಕರ್ ವಿಜೇತ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆ ಮತ್ತು ಅರಿಜಿತ್ ಸಿಂಗ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ಹಾಡು ಈಗ ಕಾಪಿ ಎಂಬ ಆರೋಪಗಳು ಕೇಳಿಬಂದಿವೆ.
ಈ ಹಾಡು ರಾಮ ಮತ್ತು ಸೀತಾ ದೇವಿಯ ಪವಿತ್ರ ಪ್ರೀತಿ ಮತ್ತು ಅವರ ಪ್ರಯಾಣವನ್ನು ವೈಭವೀಕರಿಸುತ್ತದೆ. ಹೀಗಿದ್ದಮೇಲೆ, ಈ ಹಾಡಿಗೆ ಬಳಸಿರುವ ಸೂಫಿ ಕವ್ವಾಲಿ ಶೈಲಿಯ ಸಂಗೀತಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಇದನ್ಯಾಕೆ ಇಲ್ಲಿ ಬಳಸಿಕೊಂಡಿದ್ದೀರಾ ಎಂದು ಸಂಗೀತ ಮಾಂತ್ರಿಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೂಫಿ ಕವ್ವಾಲಿ ಭಕ್ತಿ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಹೊಂದಿರುವ ಸಂಗೀತ ಪ್ರಕಾರವಾಗಿದೆ. ಈ ಸಾಂಗ್ನಲ್ಲಿ ಬಳಸಿರುವ ಟ್ಯೂನ್‌ಗಳು ರಾಮಾಯಣದಂತಹ ಪವಿತ್ರ ಮಹಾಕಾವ್ಯಕ್ಕೆ ಸೂಕ್ತವಲ್ಲ ಎಂದು ಪೋಸ್ಟ್, ಕಮೆಂಟ್ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ಈ ಹಳೆಯ ಸಿನಿಮಾದ ಟ್ಯೂನ್ ಗಳನ್ನು ಸ್ಪೂಫ್ ಎಂದು ಟೀಕಿಸುತ್ತಿದ್ದಾರೆ. ಈ ಹಾಡಿಗೆ ಬರುತ್ತಿರುವ ಟೀಕೆ, ವ್ಯಂಗ್ಯಗಳ ಪೈಕಿ ಎ.ಆರ್. ರೆಹಮಾನ್ ಆಯ್ಕೆಯ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳು ಕೇಳಿಬಂದಿವೆ. ವಾಲ್ಮೀಕಿ ರಾಮಾಯಣದಲ್ಲಿ ಸೂಫಿ ಕವ್ವಾಲಿ ಬಾರಿಸಿರುವುದು ಬಾಲಿವುಡ್‌ನ ಮರೆವಿನ ಗುರುತಾ ಎಂದು ನೆಟ್ಟಿಗರೊಬ್ಬರು ಕಟುವಾಗಿ ಟೀಕಿಸಿದ್ದು, ಇಲ್ಲಿಯೂ ಹಳೆ ಟೆಂಪ್ಲೇಟ್‌ಗಳನ್ನು ನಕಲು ಮಾಡಲಾಗಿದೆ ಎಂದಿದ್ದಾರೆ.
ಮತ್ತೊಬ್ಬ, ರಾಮಾಯಣದಲ್ಲಿ ಕವ್ವಾಲಿ ಎಂದರೇನು, ರೆಹಮಾನ್‌ಗೆ ಬುದ್ಧಿ ತಪ್ಪಿದೆಯೇ ಎಂದು ಕೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಇದು ‘ರಾಕ್‌ಸ್ಟಾರ್’ ಮತ್ತು ‘ಜೋಧಾ ಅಕ್ಬರ್’ ಸಿನಿಮಾಗಳ ‘ಕುನ್ ಫಯಾ ಕುನ್’ ಹಾಡನ್ನು ಹೋಲುತ್ತದೆ. ಈ ಸಾಂಗ್ ಮಾತ್ರವಲ್ಲ, ಚಿತ್ರದಲ್ಲಿ ರೆಹಮಾನ್ ನೀಡಿರುವ ಸಂಗೀತ ಸಂಪೂರ್ಣ ನಿರಾಸೆ ಮೂಡಿಸಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಇದೇ ನವೆಂಬರ್ 5ರಂದು ವಿಶ್ವಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ,(ಏಜೆನ್ಸೀಸ್).