ನಟ ರಣಬೀರ್ ಕಪೂರ್​ ಹಾಗೂ ಸಾಯಿ ಪಲ್ಲವಿ 
ಬಾಲಿವುಡ್

ಬಾಕ್ಸ್​ ಆಫೀಸ್​ನಲ್ಲಿ ರಾಮಾಯಣ ನಾಗಲೋಟ: 8 ದಿನದಲ್ಲಿ 1,000 ಕೋಟಿ ರೂ. ಕ್ಲಬ್ ಸೇರಿದ ಐತಿಹಾಸಿಕ ಸಿನಿಮಾ..! Ramayana

ಈ ಚಿತ್ರವು ನವೆಂಬರ್ 5ರಂದು ತೆರೆಕಂಡಿದ್ದು, ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ಜಾಗತಿಕವಾಗಿ ₹1,033.55 ಕೋಟಿ ಗಳಿಸುವ ಮೂಲಕ ಪ್ರತಿಷ್ಠಿತ ₹1,000 ಕೋಟಿ ಕ್ಲಬ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಮುಂಬೈ: ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಪೌರಾಣಿಕ ಸಿನಿಮಾ 'ರಾಮಾಯಣ' ( Ramayana ) ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ 565 ಕೋಟಿ ರೂ. ಗಡಿ ದಾಟಿರುವ ಈ ಚಿತ್ರ, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹1,000 ಕೋಟಿ ಕ್ಲಬ್ ಸೇರುವ ಮೂಲಕ ಸಿನಿ ಪಂಡಿತರ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದೆ.

ಈ ಚಿತ್ರವು ನವೆಂಬರ್ 5ರಂದು ತೆರೆಕಂಡಿದ್ದು, ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ಜಾಗತಿಕವಾಗಿ ₹1,033.55 ಕೋಟಿ ಗಳಿಸುವ ಮೂಲಕ ಪ್ರತಿಷ್ಠಿತ ₹1,000 ಕೋಟಿ ಕ್ಲಬ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಸಾಧನೆ ಮಾಡಿದ 11ನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ರಾಮಾಯಣ', ದೇಶೀಯ ಮಾರುಕಟ್ಟೆಯಲ್ಲಿ ₹675.05 ಕೋಟಿ ಗ್ರಾಸ್ ಹಾಗೂ ₹564.60 ಕೋಟಿ ನಿವ್ವಳ (Net) ಕಲೆಕ್ಷನ್ ದಾಖಲಿಸಿದರೆ, ವಿದೇಶಿ ಮಾರುಕಟ್ಟೆಯಿಂದ ಬರೋಬ್ಬರಿ ₹358.50 ಕೋಟಿ ಬಾಚಿಕೊಂಡಿದೆ.

ಚಿತ್ರದ ಭಾಷಾವಾರು ಗಳಿಕೆಯ ಅಂಕಿಅಂಶಗಳನ್ನು ಗಮನಿಸಿದರೆ 'ರಾಮಾಯಣ'ದ ಅಬ್ಬರ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಸ್ಯಾಕ್ನಿಲ್ಕ್ (Sacnilk) ವರದಿಯ ಪ್ರಕಾರ, 8ನೇ ದಿನವಾದ ಗುರುವಾರದಂದು ದೇಶಾದ್ಯಂತ 24,042 ಪ್ರದರ್ಶನಗಳಿಂದ ಚಿತ್ರವು ₹53.50 ಕೋಟಿ ನಿವ್ವಳ ಹಾಗೂ ವಿದೇಶದಲ್ಲಿ ₹25 ಕೋಟಿ ಗಳಿಸಿದೆ. ಗುರುವಾರದ ಗಳಿಕೆಯಲ್ಲಿ ಹಿಂದಿ ಅವತರಣಿಕೆಯು 19,464 ಶೋಗಳಿಂದ ₹43 ಕೋಟಿ ಪಾಲು ನೀಡಿದ್ದರೆ, ಕನ್ನಡ ಅವತರಣಿಕೆಯು 922 ಶೋಗಳಿಂದ ₹3.25 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಮಲಯಾಳಂ (₹2.80 ಕೋಟಿ), ತೆಲುಗು (₹2.30 ಕೋಟಿ) ಹಾಗೂ ತಮಿಳು (₹2.15 ಕೋಟಿ) ಅವತರಣಿಕೆಗಳೂ ಉತ್ತಮ ಗಳಿಕೆ ಕಂಡಿವೆ. ಮೊದಲ ದಿನ ₹64.85 ಕೋಟಿಯೊಂದಿಗೆ ಶುಭಾರಂಭ ಮಾಡಿದ್ದ ಚಿತ್ರ, ಶುಕ್ರವಾರ ₹48.05 ಕೋಟಿ, ಶನಿವಾರ ₹69.80 ಕೋಟಿ ಹಾಗೂ ಭಾನುವಾರ ₹56.15 ಕೋಟಿ ಗಳಿಸಿತ್ತು, ಆದರೆ 5ನೇ ದಿನವಾದ ಸೋಮವಾರ ಬರೋಬ್ಬರಿ ₹107.50 ಕೋಟಿ ಬಾಚುವ ಮೂಲಕ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ತನ್ನ ಮೊದಲ ಶತಕ ಬಾರಿಸಿತ್ತು.

ಅತ್ಯಂತ ವೇಗವಾಗಿ ₹1,000 ಕೋಟಿ ಗಡಿ ದಾಟಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 'ರಾಮಾಯಣ' ಮೂರನೇ ಸ್ಥಾನವನ್ನು ಅಲಂಕರಿಸಿದೆ. 'ಧುರಂಧರ್ 2' ಮತ್ತು 'ಪುಷ್ಪ 2' ಚಿತ್ರಗಳು 7 ದಿನಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರೆ, 'ರಾಮಾಯಣ' 8 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲಕ 10-11 ದಿನಗಳನ್ನು ತೆಗೆದುಕೊಂಡಿದ್ದ 'ಬಾಹುಬಲಿ 2' ದಾಖಲೆಯನ್ನು ಹಿಂದಿಕ್ಕಿದೆ. ದಂಗಲ್, ಆರ್‌ಆರ್‌ಆರ್, ಕೆಜಿಎಫ್ ಚಾಪ್ಟರ್ 2, ಜವಾನ್, ಪಠಾಣ್, ಕಲ್ಕಿ 2898 ಎಡಿ ಮತ್ತು ಧುರಂಧರ್ ಚಿತ್ರಗಳ ಸಾಲಿಗೆ ಈಗ 'ರಾಮಾಯಣ' ಸೇರ್ಪಡೆಯಾಗಿದೆ. ಅಷ್ಟೇ ಅಲ್ಲದೆ, ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ ₹1,000 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದಾಗಿದ್ದು, ಅವರ ಈ ಹಿಂದಿನ ಬ್ಲಾಕ್‌ಬಸ್ಟರ್ 'ಅನಿಮಲ್' ಚಿತ್ರದ ಜೀವಮಾನದ ಜಾಗತಿಕ ಗಳಿಕೆಯನ್ನು ಕೇವಲ 8 ದಿನಗಳಲ್ಲಿ ಮೀರಿಸಿದೆ.

ಇದರ ಜೊತೆಗೆ ಇನ್ನೂ ಹಲವು ದಾಖಲೆಗಳನ್ನು 'ರಾಮಾಯಣ' ತನ್ನ ಹೆಸರಿಗೆ ಬರೆದುಕೊಂಡಿದೆ. ಐದನೇ ದಿನ ₹107.50 ಕೋಟಿ ಗಳಿಸುವ ಮೂಲಕ ಹಿಂದಿಯಲ್ಲಿ ಒಂದೇ ದಿನ ಅತಿ ಹೆಚ್ಚು ನಿವ್ವಳ ಗಳಿಕೆ ಕಂಡ ಟಾಪ್ 5 ಚಿತ್ರಗಳ ಪಟ್ಟಿಗೆ ಸೇರಿರುವ ಈ ಸಿನಿಮಾ, 'ಪುಷ್ಪ 2' ದಾಖಲೆಯನ್ನು ಮುರಿದಿದೆ. ಹಾಗೆಯೇ ಹಿಂದಿ ಬೆಲ್ಟ್‌ನಲ್ಲಿ ಅತ್ಯಂತ ವೇಗವಾಗಿ ₹300 ಕೋಟಿ ನಿವ್ವಳ ಗಳಿಕೆ ಮಾಡಿದ ಶಾರುಖ್ ಖಾನ್ ಅವರ 'ಜವಾನ್' ಚಿತ್ರದ ದಾಖಲೆಯನ್ನೂ ಸರಿಗಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್, "ಹಬ್ಬದ ವಾತಾವರಣ ಹಾಗೂ ಬಾಯಿ ದೂಜ್ (Bhai Dooj) ರಜೆಯ ಲಾಭದೊಂದಿಗೆ 'ರಾಮಾಯಣ' ತಡೆಯಲಾಗದ ಶಕ್ತಿಯಾಗಿ ಮುನ್ನುಗ್ಗುತ್ತಿದೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಸತತ ಮೂರು ದಿನಗಳ ಕಾಲ ಸಾರ್ವಕಾಲಿಕ ದಾಖಲೆಯ ಏಕದಿನ ಗಳಿಕೆ ಕಂಡಿರುವುದು ಚಿತ್ರದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಮಾರು ₹4,000 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ 'ರಾಮಾಯಣ' ಭಾರತೀಯ ಚಿತ್ರರಂಗ ಕಂಡ ಅತ್ಯಂತ ದುಬಾರಿ ಮತ್ತು ಮಹತ್ವಾಕಾಂಕ್ಷೆಯ ಸಿನಿಮಾವಾಗಿದೆ. ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಭರ್ಜರಿ ಪ್ರಚಾರ ಪಡೆದಿದ್ದ ಈ ಚಿತ್ರಕ್ಕಾಗಿ, ಅಕ್ಟೋಬರ್ 27ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಿಶೇಷ ಪ್ರೀಮಿಯರ್ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಭಾರತೀಯ ಪುರಾಣದ ಕಥೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನದೊಂದಿಗೆ ತೆರೆಗೆ ತಂದಿರುವ ನಿತೇಶ್ ತಿವಾರಿ ಅವರ ಪ್ರಯತ್ನಕ್ಕೆ ಜಗತ್ತಿನಾದ್ಯಂತ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದು, ಮೊದಲ ವಾರದ ಈ ಐತಿಹಾಸಿಕ ಓಟವು ಎರಡನೇ ವಾರದಲ್ಲೂ ಮುಂದುವರಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ, (ಏಜೆನ್ಸೀಸ್​).