ಮುಂಬೈ: ಬಾಲಿವುಡ್ನ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಶ್ರೀರಾಮನ ಕುರಿತು ನೀಡಿರುವ ಒಂದು ಹೇಳಿಕೆ ಈಗ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. "ಧರ್ಮ ಯಾವುದಾದರೇನು, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮನ ಸಾರವಿದೆ" ಎಂದು ಅಖ್ತರ್ ಹೇಳಿರುವುದು ಒಂದೆಡೆ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಇನ್ನೊಂದೆಡೆ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮಂಗಳವಾರ (ನ.17) ನಡೆದ ‘ಇಂಡಿಯನ್ ಪರ್ಫಾರ್ಮಿಂಗ್ ರೈಟ್ ಸೊಸೈಟಿ’ (IPRS) ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜಾವೇದ್ ಅಖ್ತರ್, ರಾಮನನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ನೋಡಬಾರದು ಎಂದಿದ್ದರು. "ರಾಮ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಅದು ಒಂದು ಆದರ್ಶ, ನೈತಿಕತೆ ಮತ್ತು ಬದುಕುವ ವಿಧಾನವಾಗಿದೆ. ನನ್ನ ಈ ಮಾತಿಗೆ ಕೆಲವರಿಗೆ ಕೋಪ ಬರಬಹುದು. ಆದರೆ ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮನ ಗುಣಗಳಿವೆ" ಎಂದು ಅಖ್ತರ್ ಮನಬಿಚ್ಚಿ ಮಾತನಾಡಿದ್ದರು.
ಇದೇ ವೇಳೆ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬಗ್ಗೆಯೂ ಅಖ್ತರ್ ಮಾತನಾಡಿದ್ದರು. "ನಾನು ಇನ್ನೂ ಸಿನಿಮಾ ನೋಡಿಲ್ಲ. ಆದರೆ ನನ್ನ ಮಗಳು ಜೋಯಾ ಅಖ್ತರ್ ಸಿನಿಮಾ ನೋಡಿ ತುಂಬಾ ಮೆಚ್ಚಿಕೊಂಡಿದ್ದಾಳೆ. ಸಾಮಾನ್ಯವಾಗಿ ಅವಳು ಯಾವುದನ್ನೂ ಅಷ್ಟು ಸುಲಭವಾಗಿ ಹೊಗಳುವುದಿಲ್ಲ" ಎಂದು ನಗುತ್ತಾ ಹೇಳಿದ್ದರು.
ಅಖ್ತರ್ ಅವರ ಈ ಮಾತುಗಳಿಗೆ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ನಾಸ್ತಿಕ ಎಂದು ಹೇಳಿಕೊಳ್ಳುವ ಜಾವೇದ್ ಅಖ್ತರ್, ಈಗ ದಿಢೀರನೆ ರಾಮನ ಬಗ್ಗೆ ಮಾತನಾಡುತ್ತಿರುವುದರ ಹಿಂದೆ ವ್ಯಾಪಾರದ ಉದ್ದೇಶವಿದೆ ಎಂದು ಅವರು ಆರೋಪಿಸಿದ್ದಾರೆ.
ಮುಸ್ಲಿಮರು ರಾಮನನ್ನು ತಮ್ಮ ಪೂರ್ವಜರೆಂದು ಒಪ್ಪುವುದಿಲ್ಲ. ಅಖ್ತರ್ ಅವರ ಸಿನಿಮಾ ಮತ್ತು ಹಾಡುಗಳನ್ನು ನೋಡುವವರು ಹೆಚ್ಚಾಗಿ ಹಿಂದೂಗಳು. ಅವರನ್ನು ಮೆಚ್ಚಿಸಲು ಅಖ್ತರ್ ಹೀಗೆ ಮಾತನಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ರಾಮನ ಮೇಲೆ ಭಕ್ತಿ ಬಂದಿದ್ದರೆ, ಅವರು 'ಘರ್ ವಾಪಸಿ' ಮಾಡಲಿ.
ಹಿಂದೂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಜಾವೇದ್ ಅಖ್ತರ್ ಬದಲು ‘ರಾಮ್ ಗೋಪಾಲ್’ ಎಂದು ಬದಲಾಯಿಸಿಕೊಳ್ಳಲಿ. ಆಗ ದೇಶದ ಶೇ. 80ರಷ್ಟು ಹಿಂದೂಗಳು ಖುಷಿಪಡುತ್ತಾರೆ ಎಂದು ಮೌಲಾನಾ ವ್ಯಂಗ್ಯವಾಡಿದ್ದಾರೆ. ಸಿನಿಮಾ ನಟರು ಮತ್ತು ರಾಜಕಾರಣಿಗಳಿಗೆ ಯಾವುದೇ ಸಿದ್ಧಾಂತಗಳಿಲ್ಲ ಎಂದು ಅವರು ಕಿಡಿಕಾರಿದ್ದಾರೆ, (ಏಜೆನ್ಸೀಸ್).