‘ಮಹಾಕಾಳಿ’ ಚಿತ್ರದ ಟೀಸರ್ ರಿಲೀಸ್ 
ಬಾಲಿವುಡ್

ದೇವ-ಅಸುರರ ಕಾಳಗಕ್ಕೆ ಹೊಸ ಟ್ವಿಸ್ಟ್‌; ‘ಮಹಾಕಾಳಿ’ ಟೀಸರ್‌ನಲ್ಲಿ ಅಕ್ಷಯ್ ಖನ್ನಾ ಅಬ್ಬರ | Mahakali Teaser

ಪ್ರಮುಖ ಮುಖ್ಯಾಂಶಗಳು

  • ‘ಮಹಾಕಾಳಿ’ ಚಿತ್ರದ ರೋಚಕ ಟೀಸರ್ ರಿಲೀಸ್
  • ದೇವರು-ಅಸುರರ ನಡುವಿನ ಸಂಘರ್ಷಕ್ಕೆ ಹೊಸ ದೃಷ್ಟಿಕೋನ
  • ಶುಕ್ರಾಚಾರ್ಯ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಬ್ಬರ
Mahakali Teaser: ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ (PVCU)ನ ಬಹುನಿರೀಕ್ಷಿತ ಚಿತ್ರ ‘ಮಹಾಕಾಳಿ’ ಚಿತ್ರದ ಟೀಸರ್ ಇದೀಗ ರಿಲೀಸ್ ಆಗಿದೆ. ಹನು-ಮ್ಯಾನ್ ಬಳಿಕ ಪಿವಿಸಿಯುಗೆ ಸೇರ್ಪಡೆಯಾಗುತ್ತಿರುವ ಈ ಸಿನಿಮಾ, ದೇವರು-ಅಸುರರ ನಡುವಿನ ಹಳೆಯ ಸಂಘರ್ಷವನ್ನೇ ಇಟ್ಟುಕೊಂಡು ಅದಕ್ಕೆ ಹೊಸ ಆಯಾಮ ಕೊಡುವ ಸುಳಿವು ನೀಡಿದೆ.
ಸಾಮಾನ್ಯವಾಗಿ ಪುರಾಣದ ಕಥೆಗಳಲ್ಲಿ ದೇವರು ಒಳ್ಳೆಯವರು, ಅಸುರರು ಕೆಟ್ಟವರು ಅನ್ನೋ ರೀತಿಯ ಚಿತ್ರಣ ಇರುತ್ತೆ. ಆದರೆ ‘ಮಹಾಕಾಳಿ’ ಟೀಸರ್ ಇದೇ ವಿಚಾರವನ್ನೇ ಪ್ರಶ್ನೆ ಮಾಡಿದೆ. ಸಮುದ್ರ ಮಂಥನ, ಅಮೃತಕ್ಕಾಗಿ ನಡೆದ ಕಾಳಗ, ದೇವರಿಗೆ ಮಾತ್ರ ಅಮೃತ ಸಿಕ್ಕಿದ್ದು, ಅಸುರರಿಗೆ ಆಗಿರುವ ಅನ್ಯಾಯ ಸೇರಿದಂತೆ ಹಲವು ಪ್ರಶ್ನೆಗಳು ಟೀಸರ್‌ನಲ್ಲಿ ಮೂಡಿವೆ. ಅಸುರರಿಗೂ ಅವರದೇ ಆದ ಕಥೆ ಇದೆಯಾ? ಅನ್ನೋ ಪ್ರಶ್ನೆಯನ್ನು ಸಿನಿಮಾ ಪ್ರೇಕ್ಷಕರ ಮುಂದಿಡುವಂತಿದೆ.

ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ

ಟೀಸರ್‌ನ ಪ್ರಮುಖ ಆಕರ್ಷಣೆ ಅಂದ್ರೆ ಅದು ಶುಕ್ರಾಚಾರ್ಯ ಪಾತ್ರದಲ್ಲಿರುವ ಅಕ್ಷಯ್ ಖನ್ನಾ. ಅಸುರರ ಗುರುವಾಗಿರುವ ಶುಕ್ರಾಚಾರ್ಯ, ದೇವರು-ಅಸುರರ ನಡುವಿನ ಸಂಘರ್ಷಕ್ಕೆ ಹೊಸ ಅರ್ಥ ಕೊಡುವ ಪ್ರಯತ್ನ ಮಾಡುತ್ತಾರೆ. ಅಸುರರನ್ನು ಮತ್ತೆ ಮೇಲಕ್ಕೆ ತರುವ ಹೋರಾಟಕ್ಕೆ ಅವರು ಕರೆ ನೀಡುತ್ತಾರೆ. ಇಲ್ಲಿಂದ ಕಥೆ ಕೇವಲ ದೇವರು ಮತ್ತು ಅಸುರರ ನಡುವಿನ ಕಾಳಗವಾಗಿ ಉಳಿಯದೆ, ಮಾನವ ಕುಲಕ್ಕೂ ಅಪಾಯ ತಂದೊಡ್ಡುವ ಹಂತಕ್ಕೆ ಹೋಗುವ ಸೂಚನೆ ಸಿಗುತ್ತದೆ.

ರಕ್ತಬೀಜನ ಎಂಟ್ರಿ; ಮಾನವ ಕುಲಕ್ಕೆ ಅಪಾಯ?


ಟೀಸರ್‌ನಲ್ಲಿ ರಕ್ತಬೀಜನ ಪಾತ್ರವೂ ಗಮನ ಸೆಳೆಯುತ್ತದೆ. ಶುಕ್ರಾಚಾರ್ಯ, ರಕ್ತಬೀಜನಿಗೆ ಮಾನವ ಕುಲದ ನಾಶಕ್ಕೆ ಆದೇಶ ನೀಡುವ ದೃಶ್ಯವಿದೆ.‘ರಕ್ತಬೀಜ್! ಮಾನವ ಜಾತಿ ಕಾ ಸರ್ವನಾಶ್ ಕರ್ದೋ’ ಎಂಬ ಡೈಲಾಗ್‌ ಕಥೆ ಎಷ್ಟು ಡೇಂಜರಸ್ ಆಗಿ ಸಾಗಲಿದೆ ಅನ್ನೋದಕ್ಕೆ ಸಣ್ಣ ಝಲಕ್ ಕೊಡುತ್ತದೆ.

ಆ ಮಗು ಯಾರು?

ಟೀಸರ್‌ನ ಮತ್ತೊಂದು ಕುತೂಹಲಕಾರಿ ಅಂಶ ಅಂದ್ರೆ ಒಂದು ನಿಗೂಢ ಮಗು. ಟೀಸರ್ ಆರಂಭದಲ್ಲಿ ದೇವಸ್ಥಾನದಲ್ಲಿ ಮಗುವನ್ನು ಇಡುವ ದೃಶ್ಯ ಕಾಣಿಸುತ್ತೆ. ಕೊನೆಯಲ್ಲಿ ಇದೇ ಮಗು ಮಹಾಕಾಳಿಯ ಕೈಯಲ್ಲಿರುವಂತೆ ತೋರಿಸಲಾಗಿದೆ. ಈ ಮಗುವಿಗೂ ಮಹಾಕಾಳಿಗೂ ಏನು ಸಂಬಂಧ? ದೇವ-ಅಸುರರ ಕಾಳಗಕ್ಕೂ ಈ ಮಗುವಿಗೂ ಇರುವ ಲಿಂಕ್ ಏನು? ಅನ್ನೋ ಪ್ರಶ್ನೆಗಳಿಗೆ ಸಿನಿಮಾ ಉತ್ತರ ಕೊಡಬೇಕಿದೆ. ಟೀಸರ್ ಕೊನೆಯಲ್ಲಿ ‘ಅಂತ್ಯ ಪ್ರಾರಂಭವಾಗುತ್ತದೆ’ ಅನ್ನೋ ಸಾಲಿನ ಜೊತೆ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಿಸಲಾಗಿದೆ. 2027ರ ಜನವರಿ 8ರಂದು ‘ಮಹಾಕಾಳಿ’ ತೆರೆಗೆ ಬರಲಿದೆ.
ಚಿತ್ರದಲ್ಲಿ ಅಕ್ಷಯ್ ಖನ್ನಾ ಜೊತೆಗೆ ಶ್ರೀಯಾ ರೆಡ್ಡಿ, ಭೂಮಿ ಶೆಟ್ಟಿ, ರೋಹಿತ್ ಸರಾಫ್, ರಾಕೇಶ್ ಬೇಡಿ, ಸಮುದ್ರಕನಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಪೃಥ್ವಿರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಶಾಂತ್ ವರ್ಮಾ ಪಿವಿಸಿಯುನ ಕ್ರಿಯೇಟರ್ ಆಗಿದ್ದು, ಪೂಜಾ ಅಪರ್ಣಾ ಕೊಲ್ಲೂರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಆರ್.ಕೆ.ಡಿ.ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ನಿರ್ಮಾಣ ಮಾಡಿದ್ದು, ಆರ್‌ಕೆ ದುಗ್ಗಲ್ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.(ಏಜೆನ್ಸೀಸ್).