ಸುಳ್ಳು ಸುದ್ದಿ, ಡೀಪ್‌ಫೇಕ್ ಮತ್ತು AI ಕಂಟೆಂಟ್ ಹಬ್ಬಿಸುವವರಿಗೆ ಗೋವಿಂದ 100 ಕೋಟಿ ರೂ. ಮಾನನಷ್ಟ ನೋಟಿಸ್ 
ಬಾಲಿವುಡ್

ಸುಳ್ಳು ಸುದ್ದಿ ಹಬ್ಬಿಸಿದರೆ ಸುಮ್ಮನಿರಲ್ಲ: ಡೀಪ್​ಫೇಕ್​, ಎಐ ಬಳಸಿ ತೇಜೋವಧೆ; 100 ಕೋಟಿ ಮಾನನಷ್ಟದ ನೋಟಿಸ್​ ನೀಡಿದ ನಟ ಗೋವಿಂದ! Govinda Legal Notice

ಪ್ರಮುಖ ಮುಖ್ಯಾಂಶಗಳು

  • ಸೋಷಿಯಲ್​ ಮೀಡಿಯಾನಲ್ಲಿ ನಟ ಗೋವಿಂದ ಕುರಿತು ತೇಜೋವಧೆ
  • ಸುಳ್ಳು ಸುದ್ದಿ, ಡೀಪ್‌ಫೇಕ್ ಮತ್ತು AI ಕಂಟೆಂಟ್ ಹಬ್ಬಿಸುವವರಿಗೆ ಗೋವಿಂದ 100 ಕೋಟಿ ರೂ. ಮಾನನಷ್ಟ ನೋಟಿಸ್
  • ನನ್ನ ಹಾಗೂ ಕುಟುಂಬದವರ ಕುರಿತು ಸುಳ್ಳು ಸುದ್ದಿ ಹಬ್ಬಿಸಬೇಡಿ
ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ (Govinda Legal Notice) ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದ ಬಗ್ಗೆ ಹಬ್ಬುತ್ತಿರುವ ಸುಳ್ಳು ಸುದ್ದಿಗಳು ಮತ್ತು ಅಪಪ್ರಚಾರಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ತಮ್ಮ ಬಗ್ಗೆ ಅಥವಾ ತಮ್ಮ ಕುಟುಂಬದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಆಧಾರರಹಿತ, ಸುಳ್ಳು ಹಾಗೂ ಮಾನಹಾನಿಕರ ವೀಡಿಯೊಗಳು, ಫೋಟೋಗಳು ಅಥವಾ ಕಂಟೆಂಟ್ ಹಂಚಿಕೊಂಡರೆ ನೇರವಾಗಿ ಕೋರ್ಟ್ ಮೆಟ್ಟಿಲೇರಲು ಗೋವಿಂದ ನಿರ್ಧರಿಸಿದ್ದಾರೆ. ಅಲ್ಲದೆ, ಬಾಯಿಗೆ ಬಂದಂತೆ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಬರೋಬ್ಬರಿ 100 ಕೋಟಿ ರೂಪಾಯಿಗಳ ಮಾನನಷ್ಟ ಎಚ್ಚರಿಕೆ ನೋಟಿಸ್ ಜಾರಿಗೊಳಿಸಿದ್ದಾರೆ.

ನೋಟಿಸ್‌ ನೀಡಲು ಕಾರಣವೇನು?

ಇತ್ತೀಚೆಗೆ ನಟ ಗೋವಿಂದ ಮತ್ತು ಅವರ ಪತ್ನಿ ಸುನಿತಾ ಅಹುಜಾ ಅವರ ವೈವಾಹಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಚರ್ಚೆಗಳು, ವಾದ-ವಿವಾದಗಳು ಜೋರಾಗಿದ್ದವು. ಸುನಿತಾ ಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದ ಬಳಿಕ ಈ ವಿಷಯ ಮತ್ತಷ್ಟು ಮುನ್ನೆಲೆಗೆ ಬಂದಿತ್ತು.

ಇದರ ಬೆನ್ನಲ್ಲೇ, ಮಾಧ್ಯಮಗಳಲ್ಲಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗೋವಿಂದ ಅವರ ಎರಡನೇ ಮದುವೆ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ಮತ್ತು ವಿನಾಕಾರಣ ಹಬ್ಬಿದ ವಾದ-ವಿವಾದಗಳೇ ಗೋವಿಂದ ಈ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲು ಕಾರಣವಾಗಿದೆ.


ಡೀಪ್‌ಫೇಕ್ ಮತ್ತು AI ಕಂಟೆಂಟ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ

ಗೋವಿಂದ ಅವರ ಕಾನೂನು ತಂಡ ನೀಡಿರುವ ಮಾಹಿತಿ ಪ್ರಕಾರ, ಇಂದಿನ ಡಿಜಿಟಲ್ ಯುಗದಲ್ಲಿ ಟ್ರೆಂಡ್ ಆಗಿರುವ ಡೀಪ್‌ಫೇಕ್‌ಗಳು, ಮಾರ್ಫ್ ಮಾಡಿದ ಚಿತ್ರಗಳು, ಎಐ (AI) ಬಳಸಿ ಸಿದ್ಧಪಡಿಸಿದ ನಕಲಿ ವೀಡಿಯೊಗಳು ಹಾಗೂ ಆಡಿಯೋ ರೆಕಾರ್ಡಿಂಗ್‌ಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಯಾವುದೇ ಅನುಮತಿಯಿಲ್ಲದೆ ಗೋವಿಂದ ಅವರ ಧ್ವನಿ, ಮುಖ ಅಥವಾ ಖಾಸಗಿ ಬದುಕಿಗೆ ಸಂಬಂಧಿಸಿದ ವಸ್ತುಗಳನ್ನು ತಂತ್ರಜ್ಞಾನ ಬಳಸಿ ತಿರುಚಿ ಪ್ರಸಾರ ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಯಾವೆಲ್ಲಾ ಕ್ರಮಗಳನ್ನು ಎದುರಿಸಬೇಕಾಗುತ್ತದೆ?

ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಸುಳ್ಳು ಸುದ್ದಿ ಹಬ್ಬಿಸುವವರ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ಅಥವಾ ನ್ಯಾಯಾಲಯದ ಆದೇಶ ತರಬಹುದು. ಆಸ್ತಿ ಖರೀದಿ-ಮಾರಾಟದ ಮೇಲೆ ನಿರ್ಬಂಧ ಹಾಗೂ ಪಾಸ್‌ಪೋರ್ಟ್-ಸಂಬಂಧಿತ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದು.

ಕೇವಲ ವ್ಯಕ್ತಿಗಳು ಮಾತ್ರವಲ್ಲದೆ, ಇಂತಹ ಸುಳ್ಳು ಕಂಟೆಂಟ್ ಹಂಚಿಕೊಳ್ಳಲು ಅವಕಾಶ ನೀಡುವ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಹಾಗೂ ಖಾತೆಗಳಿಗೂ ನೋಟಿಸ್ ನೀಡಲಾಗಿದೆ.

ಸಿನಿಮಾ ರಂಗದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಗೋವಿಂದ, ತಮ್ಮ ಇಮೇಜ್ ಹಾಗೂ ಕೀರ್ತಿಗೆ ಮಸಿ ಬಳಿಯುವವರ ವಿರುದ್ಧ ಕಡ್ಡಿಮುರಿದಂತೆ ಮಾತನಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುವವರಿಗೆ ಇದೀಗ ದೊಡ್ಡ ಶಾಕ್ ಸಿಕ್ಕಿದಂತಾಗಿದೆ, (ಏಜನ್ಸೀಸ್​).