ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಹಾಗೂ ನಟಿ ಶಹನಾಜ್ ಟ್ರೆಜರಿ  
ಬಾಲಿವುಡ್

ಬೆಂಗಳೂರಿನಲ್ಲಿ ವಿಶೇಷ ಇರುವೆ ಖಾದ್ಯ ಸವಿದ ಬಾಲಿವುಡ್​ ನಟಿ: ರುಚಿಗೆ ಮನಸೋತ ಶಹನಾಜ್ ಟ್ರೆಜರಿ! Ant Dish

ಇತ್ತೀಚೆಗೆ ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಹಾಗೂ ನಟಿ ಶಹನಾಜ್ ಟ್ರೆಜರಿ (Shahnaz Treasury) ಅವರು ಈ ಫಾರ್ಮ್ ಹಾಗೂ ರೆಸ್ಟೋರೆಂಟ್‌ಗೆ ಭೇಟಿ ನೀಡಿ ವಿಡಿಯೋ ಹಂಚಿಕೊಂಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು: ನೀವು ಎಂದಾದರೂ ಮಲ್ಟಿ-ಸ್ಟಾರ್ ಅಥವಾ ಫ್ಯಾನ್ಸಿ ರೆಸ್ಟೋರೆಂಟ್‌ಗೆ ತೆರಳಿದಾಗ ಅಲ್ಲಿ ಮೆನು ಕಾರ್ಡ್ ಇರದಿದ್ದರೆ ಹೇಗಿರಬಹುದು ಎಂದು ಊಹಿಸಿದ್ದೀರಾ? ನಾವು ಏನು ಆರ್ಡರ್ ಮಾಡಬೇಕು, ನಮ್ಮ ಮುಂದೆ ಬರುವ ತಟ್ಟೆಯಲ್ಲಿ ಎಂತಹ ಖಾದ್ಯ ಇರಲಿದೆ ಎಂಬ ಕಲ್ಪನೆಯೇ ಇಲ್ಲದೆ ಊಟ ಸವಿಯುವ ಅನುಭವ ಹೇಗಿರುತ್ತದೆ? ಇಂತಹದ್ದೇ ಒಂದು ಅದ್ಭುತ ಮತ್ತು ರಸವತ್ತಾದ ಅನುಭವವನ್ನು ನೀಡುತ್ತಿದೆ ಬೆಂಗಳೂರಿನ ಕನಕಪುರ ರಸ್ತೆಯ ಹತ್ತಿರವಿರುವ 'ಫ್ಯಾಮ್‌ಲೋರ್' ಎಂಬ ವಿಶಿಷ್ಟ ರೆಸ್ಟೋರೆಂಟ್. ಇಲ್ಲಿಗೆ ಬರುವ ಗ್ರಾಹಕರಿಗೆ ಮೆನು ಆಯ್ಕೆ ಮಾಡುವ ಅವಕಾಶವಿರುವುದಿಲ್ಲ, ಬದಲಿಗೆ ಪ್ರತಿಯೊಂದು ತಟ್ಟೆಯೂ ಒಂದು ಹೊಸ ಆಶ್ಚರ್ಯವನ್ನು ( Ant Dish ) ತಂದೊಡ್ಡುತ್ತದೆ.

ಈ ರೆಸ್ಟೋರೆಂಟ್‌ನ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ, ಇಲ್ಲಿ ಬಳಕೆಯಾಗುವ ಪ್ರತಿಯೊಂದು ಸಾಮಗ್ರಿಯೂ ಅವರದ್ದೇ ಆದ 40 ಎಕರೆ ವಿಸ್ತಾರದ ಸಾವಯವ ತೋಟದಿಂದ ನೇರವಾಗಿ ಬರುತ್ತದೆ. ಗ್ರಾಹಕರು ತಮ್ಮಿಷ್ಟದ ಖಾದ್ಯವನ್ನು ಆರ್ಡರ್ ಮಾಡಲು ಇಲ್ಲಿ ಸಾಧ್ಯವಿಲ್ಲ. ಬದಲಿಗೆ, ಅಂದಿನ ದಿನ ತೋಟದಲ್ಲಿ ಸಿಕ್ಕ ತಾಜಾ ತರಕಾರಿ-ಹಣ್ಣುಗಳು ಹಾಗೂ ಚೆಫ್​ಗಳ ಸೃಜನಶೀಲತೆಗೆ ಅನುಗುಣವಾಗಿ ಅಡುಗೆ ತಯಾರಾಗುತ್ತದೆ. ಹೀಗಾಗಿಯೇ ನೀವು ಇಲ್ಲಿಗೆ ಎಷ್ಟು ಬಾರಿ ಭೇಟಿ ನೀಡಿದರೂ, ಪ್ರತಿ ಬಾರಿಯೂ ನಿಮಗೊಂದು ವಿಭಿನ್ನ ಹಾಗೂ ಹೊಸ ಬಗೆಯ ಆಹಾರ ಪಯಣದ ಅನುಭವ ಸಿಗುತ್ತದೆ.

ಇತ್ತೀಚೆಗೆ ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಹಾಗೂ ನಟಿ ಶಹನಾಜ್ ಟ್ರೆಜರಿ (Shahnaz Treasury) ಅವರು ಈ ಫಾರ್ಮ್ ಹಾಗೂ ರೆಸ್ಟೋರೆಂಟ್‌ಗೆ ಭೇಟಿ ನೀಡಿ ವಿಡಿಯೋ ಹಂಚಿಕೊಂಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಹನಾಜ್ ಅವರು ಹಾಲಿನ ಬಾಟಲಿಯಲ್ಲಿ ನೀಡಿದ ಜ್ಯೂಸ್‌ನಿಂದ ಹಿಡಿದು ಮರದ ಎಲೆಗಳಲ್ಲಿ ಗೂಡು ಕಟ್ಟುವ ಇರುವೆಗಳಿಂದ ತಯಾರಿಸಿದ ಅಪರೂಪದ ಖಾದ್ಯದವರೆಗೆ ಎಲ್ಲವನ್ನೂ ಸವಿಯುವುದನ್ನು ಕಾಣಬಹುದು.

ಅಷ್ಟೇ ಅಲ್ಲದೆ, ಸಮುದ್ರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ತಯಾರಿಸಿದ 'ಆಯಿಲ್ ಸ್ಪಿಲ್' ಮಾದರಿಯ ಖಾದ್ಯ, ತಿನ್ನಬಹುದಾದ ಸೂರ್ಯಕಾಂತಿ ಹೂವು ಹಾಗೂ ವಿಸ್ಕಿ-ಬೆಲ್ಲ-ಸಾಬೂದಾನಿ ಮಿಶ್ರಿತ ಸಿಹಿ ತಿಂಡಿಗಳನ್ನು ಶಹನಾಜ್ ಇಲ್ಲಿ ಸವಿದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೌಶಿಕ್ ರಾಜ್ ಮತ್ತು ಜಾನ್ಸನ್ ಎಬೆನರ್ ಅವರು ಸ್ಥಾಪಿಸಿದ ಈ 'ಫ್ಯಾಮ್‌ಲೋರ್' ಸಂಪೂರ್ಣವಾಗಿ ಪ್ರಕೃತಿಯೊಂದಿಗೆ ಒಂದಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಯಾವುದೇ ಗ್ಯಾಸ್ ಸಿಲಿಂಡರ್ ಬಳಸದೆ, ಕೇವಲ ಸೌದೆ ಒಲೆಯಲ್ಲಿ (Wood-fired stove) ಸಾಂಪ್ರದಾಯಿಕವಾಗಿ ಅಡುಗೆ ಮಾಡಲಾಗುತ್ತದೆ. ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ ಬೆಳೆಗಳನ್ನು ಮಾತ್ರ ತೋಟದಲ್ಲಿ ಬೆಳೆಯಲಾಗುತ್ತಿದ್ದು, ಪ್ರತಿ ವಾರವೂ ಇಲ್ಲಿನ ಆಹಾರದ ಪಟ್ಟಿ ಬದಲಾಗುತ್ತಿರುತ್ತದೆ. ನಿಸರ್ಗದ ಮಡಿಲಲ್ಲಿ ಕುಳಿತು ಪ್ರಕೃತಿದತ್ತ ಅಡುಗೆ ಸವಿಯುವುದು ಪ್ರತಿಯೊಬ್ಬ ಭೋಜನ ಪ್ರಿಯರಿಗೂ ಮರೆಯಲಾಗದ ಅನುಭವ ನೀಡುತ್ತದೆ.

ವಿಶೇಷವೆಂದರೆ, ಇಲ್ಲಿ ಒಂದೇ ಬಾರಿಗೆ ಕೇವಲ 18 ಜನರಿಗೆ ಮಾತ್ರ ಕುಳಿತು ಊಟ ಮಾಡಲು ಅವಕಾಶವಿದೆ. ವಾರದ ದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ 5 ವಿಧದ ಖಾದ್ಯಗಳಿದ್ದು, ಒಬ್ಬರಿಗೆ 3 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಇನ್ನು ರಾತ್ರಿಯ ಊಟದಲ್ಲಿ 10 ವಿಧದ ಖಾದ್ಯಗಳಿದ್ದು, ಒಬ್ಬರಿಗೆ ಐದು ಸಾವಿರ ರೂ. ದರವಿರುತ್ತದೆ. ಇಲ್ಲಿ ಊಟ ಸವಿಯಲು ಮೊದಲೇ ಸೀಟುಗಳನ್ನು ಕಾಯ್ದಿರಿಸುವುದು ಕಡ್ಡಾಯವಾಗಿದೆ.

ತಮ್ಮ ಈ ವಿನೂತನ ಶೈಲಿಯಿಂದಾಗಿ ಫ್ಯಾಮ್‌ಲೋರ್ ರೆಸ್ಟೋರೆಂಟ್ 'ಟ್ಯಾಟ್ಲರ್' (Tatler) ಸಂಸ್ಥೆಯ ಏಷ್ಯಾ-ಪೆಸಿಫಿಕ್ ವಲಯದ ಟಾಪ್ 100 ಹಾಗೂ ಭಾರತದ ಟಾಪ್ 20 ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ, (ಏಜೆನ್ಸೀಸ್​).