ಸಿನಿಮಾರಂಗದ ಅನುಭವಗಳ ಬಗ್ಗೆ ಮಾತನಾಡಿರುವ ನಟಿ ರಾಧಿಕಾ ಆಪ್ಟೆ 
ಬಾಲಿವುಡ್

‘ನನ್ನ ವಾಚ್‌ಮನ್, ಡ್ರೈವರ್ ಕೂಡ ಆ ವಿಡಿಯೋ ನೋಡಿದ್ರು’; ಸಿನಿಮಾ ರಂಗದ ಕರಾಳ ಅನುಭವ ಬಿಚ್ಚಿಟ್ಟ ರಾಧಿಕಾ ಆಪ್ಟೆ! Radhika Apte

ಇಂಟಿಮೇಟ್​ ಸೀನ್​ ಲೀಕ್​ ಆದಾಗ ನಾಲ್ಕು ದಿನ ಮನೆಯಿಂದ ಹೊರಬರಲಿಲ್ಲ. ನನ್ನ ವಾಚ್‌ಮನ್, ಡ್ರೈವರ್ ಕೂಡ ಆ ವಿಡಿಯೋ ನೋಡಿದ್ದರು ಎಂದು ನಟಿ ರಾಧಿಕಾ ಆಪ್ಟೆ (Radhika Apte) ಸಿನಿಮಾರಂಗದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ.

ಮುಂಬೈ: ಸಿನಿಮಾ ರಂಗದಲ್ಲಿ ನಟಿಯರಿಗೆ ಗ್ಲಾಮರ್, ಐಷಾರಾಮಿ ಜೀವನ, ಹೆಸರು, ಪ್ರಸಿದ್ಧಿ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಜನ ಅಂದುಕೊಳ್ಳುತ್ತಾರೆ. ಆದರೆ ಪರದೆ ಹಿಂದೆ ಅವರು ಪಡುವ ಯಾತನೆ, ಎದುರಿಸುವ ಬೆದರಿಕೆಗಳು ಮತ್ತು ಅವಮಾನಗಳ ಬಗ್ಗೆ ತಿಳಿದಿರುವುದಿಲ್ಲ.

ಬೋಲ್ಡ್ ನಟನೆಗೆ ಮತ್ತು ನೇರಮಾತಿಗೆ ಹೆಸರುವಾಸಿಯಾಗಿರುವ ಜನಪ್ರಿಯ ನಟಿ ರಾಧಿಕಾ ಆಪ್ಟೆ (Radhika Apte) ತಮ್ಮ ಸಿನಿಮಾದ ಇಂಟಿಮೇಟ್ ಸೀನ್ ಸೋರಿಕೆಯಾದಾಗ ತಾವು ಅನುಭವಿಸಿದ ನರಕಯಾತನೆಯನ್ನು ಈಗ ತೆರೆದಿಟ್ಟಿದ್ದಾರೆ. ಆ ಘಟನೆ ತಮ್ಮ ಜೀವನದಲ್ಲಿ ಎಷ್ಟು ಆಘಾತ ಉಂಟುಮಾಡಿತ್ತು ಎಂಬುದರ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ.

ನನ್ನ ವಾಚ್‌ಮನ್, ಡ್ರೈವರ್ ಕೂಡ ಅದನ್ನು ನೋಡಿದ್ರು!

ಪ್ರಸ್ತುತ 'ಲಸ್ಟ್ ಸ್ಟೋರೀಸ್ 3' ವೆಬ್​ಸೀರಿಸ್​ನಲ್ಲಿ ಬ್ಯುಸಿಯಾಗಿರುವ ರಾಧಿಕಾ ಆಪ್ಟೆ, ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಹಳೆಯ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ನಾವು ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವ ಬಗ್ಗೆ ಮಾತನಾಡುತ್ತೇವೆ. ಆದರೆ ನಾನು ನಟಿಸಿದ್ದ ದೃಶ್ಯವೊಂದರ ವಿಡಿಯೋ ಲೀಕ್ ಆದಾಗ, ನಾಲ್ಕು ದಿನಗಳ ಕಾಲ ನನಗೆ ಮನೆಯಿಂದ ಹೊರಬರಲು ಸಾಧ್ಯವೇ ಆಗಿರಲಿಲ್ಲ. ಯಾರಾದರೂ ಬಂದು ಡೋರ್‌ಬೆಲ್ ಬಾರಿಸಬಹುದು ಅಥವಾ ನಮ್ಮ ಮೇಲೆ ಕೋಪಗೊಂಡವರು ಮನೆಯ ಹೊರಗೆ ನಿಂತಿರಬಹುದು ಎಂದು ಭಯ ಶುರುವಾಗುತ್ತದೆ ಎಂದು ರಾಧಿಕಾ ವಿವರಿಸಿದ್ದಾರೆ.

ಅಷ್ಟೇ, ಅಲ್ಲದೆ ನಾನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ವಾಚ್‌ಮನ್ ಹಾಗೂ ಕಾರ್​ ಡ್ರೈವರ್​ ಕೂಡ ಆ ದೃಶ್ಯವನ್ನು ನೋಡಿದ್ದರು. ಆ ಸಂದರ್ಭದಲ್ಲಿ ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸನ್ನಿವೇಶಗಳು ಹೊಸದಾಗಿ ಸಿನಿಮಾ ರಂಗಕ್ಕೆ ಬಂದ ನಟಿಯರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ನಟಿ ಹೇಳಿದ್ದಾರೆ.

ಡ್ರೈವರ್ ಮತ್ತು ಸೆಟ್ ಸಹಾಯಕರ ಮುಂದೆ ಕೈಮುಗಿದ ನಟಿ!

ಆ ಸಮಯದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರಾಧಿಕಾಗೆ ಯಾರನ್ನು ನಂಬಬೇಕು ಎಂದೇ ತಿಳಿಯದ ಪರಿಸ್ಥಿತಿ ಎದುರಾಗಿತ್ತಂತೆ. ತಮ್ಮ ಸುರಕ್ಷತೆ ಬಗ್ಗೆ ಆತಂಕಗೊಂಡ ಅವರು, ತಮ್ಮ ಚಿತ್ರತಂಡದ ನಂಬಿಕಸ್ಥರಾದ ಡ್ರೈವರ್ ಹಾಗೂ ಸೆಟ್ ಸಹಾಯಕರಿಗೆ ಫೋನ್ ಮಾಡಿ ಮಾತನಾಡಿದ್ದಾರೆ.

"ನಾನು ಅವರಿಗೆ ಫೋನ್ ಮಾಡಿ, 'ಒಂದು ಕ್ಲಿಪ್ ಲೀಕ್ ಆಗಿದೆ. ನೀವು ನೋಡಿದ್ದೀರಾ? ನೋಡಿಲ್ಲ ಅಂದ್ರೆ ಕಳುಹಿಸುತ್ತೇನೆ ನೋಡಿ. ನಿಮಗೆ ಅದರಿಂದ ತೊಂದರೆ ಇಲ್ಲದಿದ್ದರೆ, ನೀವು ನನ್ನನ್ನು ರಕ್ಷಿಸಬೇಕು. ಇಲ್ಲವಾದರೆ ನನ್ನೊಂದಿಗೆ ಕೆಲಸ ಮಾಡಬೇಡಿ, ನಿಮ್ಮ ಸಂಬಳ ತೆಗೆದುಕೊಂಡು ಹೋಗಬಹುದು' ಎಂದು ನೇರವಾಗಿ ಹೇಳಿದೆ. ಅದಕ್ಕೆ ಅವರಿಬ್ಬರೂ, 'ಮೇಡಮ್, ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ' ಎಂದು ಧೈರ್ಯ ತುಂಬಿದರು. ಆ ಸಮಯದಲ್ಲಿ ನಾನು ಒಂಟಿಯಾಗಿದ್ದರಿಂದ ನನಗೆ ನಿಜಕ್ಕೂ ಪ್ರಾಣಭಯವಾಗಿತ್ತು" ಎಂದು ರಾಧಿಕಾ ಆ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ, (ಏಜೆನ್ಸೀಸ್​).