ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬೆದರಿಕೆ 
ಬಾಲಿವುಡ್

ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಜೀವ ಬೆದರಿಕೆ: ಆಯುಷ್ಮಾನ್-ತುಷಾರ್‌ಗೆ ಫ್ರಾಂಕ್​ ಮಾಡಲು ಹೋಗಿ ಸಿಕ್ಕಿಬಿದ್ದ "ಸಿಲಿಕಾನ್ ಸಿಟಿ" ಇಂಜಿನಿಯರ್! Lawrence Bishnoi Gang

ಮುಂಬೈ: ಸದ್ಯ ಬಾಲಿವುಡ್​ನಲ್ಲಿ ನಟ-ನಟಿಯರಿಗಿಂತ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್ ಹೆಸರೇ ಹೆಚ್ಚು ಸದ್ದು ಮಾಡುತ್ತಿದೆ. ನಟ ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ನಂತರ, ನಟ ತುಷಾರ್​ ಕಪೂರ್​ ಹಾಗೂ ಆಯುಷ್ಮಾನ್ ಖುರಾನಾಗೆ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಕರೆ ಬಂದಿದ್ದವೆಂದು ವರದಿಯಾಗಿತ್ತು. ಆದರೆ ಈಗ, ಈ ಬೆದರಿಕೆ ಕರೆಗಳ ಅಸಲಿ ಸತ್ಯ ಬೇರೆಯೇ ಆಗಿದೆ.

ಸ್ಟಾರ್​ ನಟರಾದ ಆಯುಷ್ಮಾನ್ ಹಾಗೂ ತುಷಾರ್​ ಕಪೂರ್​ಗೆ ಬೆದರಿಕೆ ಹಾಕಿದ್ದ ಭೂಪ ಯಾವುದು ಅಂಡರ್‌ವರ್ಲ್ಡ್ ಡಾನ್ ಅಲ್ಲ; ಬದಲಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. ಹೌದು, ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ವೈಭವ್ ಮಿಶ್ರಾ ಎಂಬ ಟೆಕ್ಕಿ ಈ ಘಟನೆ ಹಿಂದಿರುವ ಆಗಂತುಕನೆಂದು ಪತ್ತೆಯಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಆಡಿಯೋ ಬೆದರಿಕೆ: ತುಷಾರ್ ಕಪೂರ್‌ಗೆ 5 ಕೋಟಿ ಡಿಮ್ಯಾಂಡ್!

ಮುಂಬೈ ಅಪರಾಧ ವಿಭಾಗದ ಮೂಲಗಳ ಪ್ರಕಾರ, ಆರೋಪಿ ವೈಭವ್ ಮಿಶ್ರಾ ಬಾಲಿವುಡ್ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಲು ಇನ್‌ಸ್ಟಾಗ್ರಾಂ ಅನ್ನು ಆರಿಸಿಕೊಂಡಿದ್ದಾನೆ. ನಟ ತುಷಾರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಬೆದರಿಕೆಯ ಆಡಿಯೋ ಕ್ಲಿಪ್‌ಗಳನ್ನು ಕಳುಹಿಸಿದ್ದಾನೆ. ಅಷ್ಟೇ ಅಲ್ಲ, ನಟ ತುಷಾರ್ ಕಪೂರ್ ಬಳಿ ಬರೋಬ್ಬರಿ 5 ಕೋಟಿ ರೂಪಾಯಿ ಹಣ ಕೊಡುವಂತೆ ಡಿಮ್ಯಾಂಡ್ ಇಟ್ಟಿದ್ದಾನೆ.

ತನ್ನನ್ನು ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕುಖ್ಯಾತ ಶೂಟರ್ ‘ಹ್ಯಾರಿ ಬಾಕ್ಸರ್’ ಎಂದು ಪರಿಚಯಿಸಿಕೊಂಡಿದ್ದ. ಈ ಮೆಸೇಜ್​ ನೋಡಿ ಬೆಚ್ಚಿಬಿದ್ದ ನಟರು ತಕ್ಷಣ ಮುಂಬೈನ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕೇಸ್ ಅನ್ನು ಕ್ರೈಮ್ ಬ್ರಾಂಚ್‌ಗೆ ವರ್ಗಾಯಿಸಿದರು.

'ಹ್ಯಾರಿ ಬಾಕ್ಸರ್' ನಕಲಿ, ಟೆಕ್ಕಿ ಅಸಲಿ: ಸಿಕ್ಕಿಬಿದ್ದಿದ್ದು ಹೇಗೆ?

ತನಿಖೆಗೆ ಇಳಿದ ಪೊಲೀಸರಿಗೆ ಮೊದಲ ಹಂತದಲ್ಲೇ ಸಂದೇಹ ಶುರುವಾಯಿತು. ಬೆದರಿಕೆ ಆಡಿಯೋದಲ್ಲಿದ್ದ ಧ್ವನಿಯನ್ನು ಅಸಲಿ 'ಹ್ಯಾರಿ ಬಾಕ್ಸರ್'ನ ವಾಯ್ಸ್ ಸ್ಯಾಂಪಲ್ ಜೊತೆ ಮ್ಯಾಚ್ ಮಾಡಿ ನೋಡಿದಾಗ, ಅದು ಹೊಂದಾಣಿಕೆಯೇ ಆಗಲಿಲ್ಲ. ಯಾರೋ ನಕಲಿ ಐಡಿ ಬಳಸಿ ಆಟವಾಡುತ್ತಿದ್ದಾನೆ ಎಂದು ಖಚಿತಪಡಿಸಿಕೊಂಡ ತನಿಖಾಧಿಕಾರಿಗಳು, ಸೈಬರ್ ಸೆಲ್ ಸಹಾಯದಿಂದ ಡಿಜಿಟಲ್ ಹೆಜ್ಜೆಗುರುತುಗಳನ್ನು ಬೆನ್ನಟ್ಟಿದರು.

ಆ ತನಿಖೆಯ ದಾರಿ ಪೊಲೀಸರನ್ನು ನೇರವಾಗಿ ಬೆಂಗಳೂರಿಗೆ ತಂದು ನಿಲ್ಲಿಸಿದೆ. ಬುಧವಾರ ಬೆಂಗಳೂರಿಗೆ ಬಂದಿಳಿದ ಮುಂಬೈ ಪೊಲೀಸರು, ಯಾವುದೇ ಸುಳಿವು ನೀಡದೆ ವೈಭವ್ ಮಿಶ್ರಾನನ್ನು ಲಾಕ್ ಮಾಡಿದ್ದಾರೆ. ಸದ್ಯ ಆತನನ್ನು ಟ್ರಾನ್ಸಿಟ್ ರಿಮಾಂಡ್ ಮೂಲಕ ಮುಂಬೈಗೆ ಕರೆದೊಯ್ಯಲಾಗುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಮನವಿ ಮಾಡಲಿದ್ದಾರೆ ಎಂದು ಡಿಸಿಪಿ ರಾಜ್‌ತಿಲಕ್ ರೋಷನ್ ತಿಳಿಸಿದ್ದಾರೆ.

ಕೇವಲ ತಮಾಷೆಗಾಗಿ ಮಾಡಿದ್ನಾ? ಪೊಲೀಸರಿಗೆ ದಟ್ಟ ಅನುಮಾನ!

ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿ ವೈಭವ್ ಮಿಶ್ರಾ ಹೇಳಿದ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಬಾಲಿವುಡ್ ಸ್ಟಾರ್‌ಗಳ ನಡುವೆ ಸ್ವಲ್ಪ ಆತಂಕ ಸೃಷ್ಟಿಸಲು, ಕೇವಲ ತಮಾಷೆಗಾಗಿ ಹೀಗೆ ಮಾಡಿದೆ ಎಂದು ಆತ ಹೇಳಿಕೊಂಡಿದ್ದಾನೆ.

ಆದರೆ ಮುಂಬೈ ಪೊಲೀಸರು ಈ ‘ಪ್ರಾಂಕ್’ ಕಥೆಯನ್ನು ಅಷ್ಟು ಸುಲಭವಾಗಿ ನಂಬಲು ಸಿದ್ಧರಿಲ್ಲ. 5 ಕೋಟಿ ಸುಲಿಗೆ ಬೇಡಿಕೆ ಇಟ್ಟು, ಕುಖ್ಯಾತ ಗ್ಯಾಂಗ್‌ಸ್ಟರ್ ಹೆಸರನ್ನು ದುರುಪಯೋಗಪಡಿಸಿಕೊಳ್ಳುವುದು ಕೇವಲ ತಮಾಷೆಯಲ್ಲ. ಇದರ ಹಿಂದೆ ದೊಡ್ಡ ಅಪರಾಧ ಜಾಲದ ಕೈವಾಡವಿದೆಯೇ? ಈತನಿಗೆ ಬಿಷ್ಣೋಯ್ ಗ್ಯಾಂಗ್ ಜೊತೆ ನಿಜವಾಗಿಯೂ ಕನೆಕ್ಷನ್ ಇದೆಯೇ? ಅಥವಾ ಇದೇ ರೀತಿ ಬೇರೆ ಸೆಲೆಬ್ರಿಟಿಗಳಿಗೂ ಬ್ಲಾಕ್‌ಮೇಲ್ ಮಾಡಿ ಹಣ ಕೀಳಲು ಪ್ಲಾನ್ ಮಾಡಿದ್ದನೇ? ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್​).