ಮುಂಬೈ: ದಶಕಗಳಿಂದ ಪ್ರತಿ ಭಾನುವಾರ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮುಂಬೈನ ಪ್ರತಿಷ್ಟಿತ ಬಂಗಲೆ 'ಜಲ್ಸಾ' ಮುಂದೆ ಜಮಾಯಿಸುತ್ತಿದ್ದ ಅಭಿಮಾನಿಗಳಿಗೆ ಈ ಭಾನುವಾರ ಕಂಡ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸಿದೆ.
ಪ್ರತಿ ಭಾನುವಾರ ಸದಾ ಕೈಬೀಸಿ ಮುಗುಳುನಗೆ ಬೀರುತ್ತಿದ್ದ ಬಾಲಿವುಡ್ ಶೆಹನ್‌ಶಾ ಅಮಿತಾಭ್ ಬಚ್ಚನ್, ಈ ಬಾರಿ ಅಭಿಮಾನಿಗಳಿಗೆ ಬುಲೆಟ್ ಪ್ರೂಫ್ ಗ್ಲಾಸ್ ಹಿಂದಿನಿಂದ ದರ್ಶನ ನೀಡಿದ್ದಾರೆ. ಇದು ಬಾಲಿವುಡ್ ನಟರಿಗೆ ಗ್ಯಾಂಗ್‌ಸ್ಟರ್‌ಗಳ ಬೆದರಿಕೆ ಕರೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುವುದಲ್ಲೆ ಪುಷ್ಠಿ ನೀಡಿದೆ.
ದಶಕಗಳಿಂದಲೂ ಭಾನುವಾರ ಸಂಜೆ ಅಮಿತಾಭ್ ಬಚ್ಚನ್ ಜಲ್ಸಾದ ಗೇಟ್ ಬಳಿ ಎತ್ತರದ ಪೀಠವೇರಿ ಅಭಿಮಾನಿಗಳಿಗೆ ಕೈಬೀಸುವುದು ವಾಡಿಕೆಯಾಗಿದೆ.
ಆದರೆ ನವೆಂಬರ್ 1 ರ ಸಂಜೆ, ಆ ಪೀಠದ ಮೂರೂ ಬದಿಗಳಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಪರದೆ ಅಳವಡಿಸಲಾಗಿತ್ತು. ಒಳಗೆ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿರಬಹುದೆಂದು ಹೇಳಲಾದ ಉಡುಪಿನಲ್ಲಿದ್ದ ಬಿಗ್ ಬಿ, ಆ ರಕ್ಷಣಾತ್ಮಕ ಪರದೆಯ ಹಿಂದಿನಿಂದಲೇ ಅಭಿಮಾನಿಗಳಿಗೆ ಕೈಮುಗಿದಿದ್ದಾರೆ. ಇದು ಪೊಲೀಸರ ಸೂಚನೆಯೋ ಅಥವಾ ಸ್ವತಃ ಬಚ್ಚನ್ ಅವರ ರಕ್ಷಣಾ ಮುನ್ನೆಚ್ಚರಿಕೆಯೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಬಾಲಿವುಡ್‌ನ ಇಂದಿನ ಕರಾಳ ಪರಿಸ್ಥಿತಿಗೆ ಇದು ನಿದರ್ಶನವಾಗಿದೆ.
ಅಕ್ಟೋಬರ್ 23 ರಂದು ಮುಂಬೈ ಮೇಯರ್ ರಿತು ತಾವ್ಡೆ ಹಾಗೂ ಉಪ ಮೇಯರ್ ಸಂಜಯ್ ಘಾಡಿ ಅವರಿಗೆ ಬೆದರಿಕೆ ಇಮೇಲ್ ಬಂದಿತ್ತು. ಅಕ್ಟೋಬರ್ 31 ರಿಂದ ನವೆಂಬರ್ 27 ರ ಅವಧಿಯಲ್ಲಿ ಅಮಿತಾಭ್ ಬಚ್ಚನ್ ಅವರ 'ಜಲ್ಸಾ' ಬಂಗಲೆ, ಮೇಯರ್ ಕಚೇರಿ, ಶಾಲೆ ಹಾಗೂ ನವೆಂಬರ್ 27 ರಂದು ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯಲಿರುವ ಗಾಯಕ ದಿಲ್ಜಿತ್ ದೋಸಾಂಜ್ ಅವರ ಕಾನ್ಸರ್ಟ್ ಮೇಲೆ ಬಾಂಬ್ ಮತ್ತು ಗ್ರೆನೇಡ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜುಹು ಸೇರಿದಂತೆ ಮುಂಬೈನ ಪ್ರಮುಖ ಕಡೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬಚ್ಚನ್ ಮನೆಗೆ ಬೆದರಿಕೆ ಬರುವ ಕೆಲವೇ ದಿನಗಳ ಮೊದಲು ಅಕ್ಟೋಬರ್ 18 ರಂದು ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಮೇಲೆ ಭೀಕರ ದಾಳಿ ನಡೆದಿತ್ತು. ಫುಟ್ಬಾಲ್ ಆಟವಾಡಿ, ಕಾರಿನಲ್ಲಿ ವಾಪಸಾಗುತ್ತಿದ್ದ ಟೈಗರ್ ಶ್ರಾಫ್ ಮೇಲೆ ಇಬ್ಬರು ಅಪರಿಚಿತರು ಮನಬಂದಂತೆ ಗುಂಡು ಹಾರಿಸಿದ್ದರು.
ಟೈಗರ್ ಶ್ರಾಫ್ ಮೇಲಿನ ದಾಳಿಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಸಲ್ಮಾನ್ ಖಾನ್ ಜೊತೆಗಿನ ಆಪ್ತತೆಯೇ ಈ ದಾಳಿಗೆ ಕಾರಣ ಎಂದು ಗ್ಯಾಂಗ್ ಹೇಳಿಕೊಂಡಿದೆ. ಆರೋಪಿಗಳು ಕೇವಲ ಟೈಗರ್ ಶ್ರಾಫ್ ಮಾತ್ರವಲ್ಲದೆ, ಬಾಲಿವುಡ್‌ನಲ್ಲಿ ಭೀತಿ ಸೃಷ್ಟಿಸಲು ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಇವರ ಹಿಟ್ ಲಿಸ್ಟ್ನಲ್ಲಿದ್ದಾರೆಂದು ಹೇಳಲಾಗುತ್ತಿದೆ, (ಏಜೆನ್ಸೀಸ್).