ಮುಂಬೈ: ಖ್ಯಾತ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ, ಗಾಯಕಿ ಹಾಗೂ ಯಶಸ್ವಿ ಉದ್ಯಮಿಯಾಗಿರುವ ಅನನ್ಯಾ ಬಿರ್ಲಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ತಮ್ಮ ವೈಯಕ್ತಿಕ ಬದುಕಿನ ಕುತೂಹಲಕಾರಿ ಸೀಕ್ರೆಟ್ ಒಂದನ್ನು ಬಿಚ್ಚಿಡುವ ಮೂಲಕ ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಬಾಲಿವುಡ್ನ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್ ಸೀಸನ್ 9'ರಲ್ಲಿ ಭಾಗವಹಿಸಿದ್ದ ಅನನ್ಯಾ, ಒಬ್ಬನೇ ವ್ಯಕ್ತಿ ತಮಗೆ ಹಲವು ಬಾರಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಮಾತಿಗಿಳಿದು, ಕೇವಲ ಎರಡು ಶ್ರೀಮಂತ ಕುಟುಂಬಗಳ ವ್ಯವಹಾರಿಕ ಸಾಮ್ಯತೆ ಅಥವಾ ಬ್ರ್ಯಾಂಡ್ಗಳ ಹೊಂದಾಣಿಕೆಯ ಕಾರಣಕ್ಕೆ ನಿಮಗೆ ಶ್ರೀಮಂತ ಉದ್ಯಮಿ ಕುಟುಂಬದಿಂದ ಮದುವೆ ಪ್ರಸ್ತಾಪ ಬಂದಿದೆಯೇ? ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನನ್ಯಾ, ಅದು ಬ್ರ್ಯಾಂಡ್ಗಳ ಹೊಂದಾಣಿಕೆಯೇ ಎಂದು ನನಗೆ ಗೊತ್ತಿಲ್ಲ. ಆದರೆ, ಒಬ್ಬ ವ್ಯಕ್ತಿಯಿಂದ ಹಲವು ಬಾರಿ ದೊಡ್ಡ ಮಟ್ಟದ ಮದುವೆ ಪ್ರಸ್ತಾಪ ಬಂದಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಒಬ್ಬನೇ ವ್ಯಕ್ತಿಯಿಂದ ಮತ್ತೆ ಮತ್ತೆ ಪ್ರಸ್ತಾಪ ಬಂದಿತ್ತೇ? ಎಂದು ಕರಣ್ ಅಚ್ಚರಿಯಿಂದ ಮರುಪ್ರಶ್ನಿಸಿದಾಗ ಅನನ್ಯಾ ಹೌದು ಎಂದು ಸ್ಪಷ್ಟಪಡಿಸಿದರು. ಆದರೆ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಮಾತ್ರ, ಆ ಹೆಸರನ್ನು ಈಗ ಹೇಳಲು ಸಾಧ್ಯವಿಲ್ಲ ಎಂದು ನಗುತ್ತಲೇ ಜಾರಿಕೊಂಡರು. ವಿಶೇಷವೆಂದರೆ, ಅನನ್ಯಾ ಈ ಹಿಂದೆಯೇ ಆ ವ್ಯಕ್ತಿಯ ಪ್ರಸ್ತಾಪವನ್ನು ನಿರಾಕರಿಸಿದ್ದರಂತೆ. ಆದರೂ ಮತ್ತೆ ಮತ್ತೆ ಪ್ರಸ್ತಾಪ ಬಂದಿದ್ದು ಅವರ ಪೋಷಕರಿಗೂ ಬೇಸರ ತರಿಸಿತ್ತು ಎಂದು ಅನನ್ಯಾ ಹೇಳಿಕೊಂಡಿದ್ದಾರೆ.
ಈ ಶೋ ಪ್ರಸಾರವಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಆ ಮಿಸ್ಟರಿ ಮ್ಯಾನ್ ಯಾರು ಎಂಬ ಬಗ್ಗೆ ನೆಟ್ಟಿಗರು ತಲೆಕೆಡಿಸಿಕೊಂಡು ತಮ್ಮದೇ ಆದ ಲೆಕ್ಕಾಚಾರ ಹಾಕುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಬಳಸಿದ ಬ್ರ್ಯಾಂಡ್ ಮೀಟ್ಸ್ ಬ್ರ್ಯಾಂಡ್ ಎಂಬ ಮಾತಿನ ಆಧಾರದಲ್ಲಿ ಕೆಲವರು ಉದ್ಯಮಿ ಕವಿನ್ ಮಿತ್ತಲ್ ಹೆಸರನ್ನು ಊಹಿಸುತ್ತಿದ್ದಾರೆ. ಇನ್ನು ಕೆಲವರು, ದೇಶದಲ್ಲಿ ಅಂಬಾನಿ ಕುಟುಂಬವೊಂದೇ ಅಲ್ಲ, ಗೋದ್ರೆಜ್, ಬಜಾಜ್, ಹಿಂದೂಜಾ ಮತ್ತು ಜಿಂದಾಲ್ ಸೇರಿದಂತೆ ಹಲವು ಪ್ರಭಾವಿ ಉದ್ಯಮಿ ಕುಟುಂಬಗಳಿವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಇವೆಲ್ಲವೂ ಕೇವಲ ಊಹಾಪೋಹಗಳಷ್ಟೇ ಆಗಿದ್ದು, ಅನನ್ಯಾ ಮಾತ್ರ ಆ ವ್ಯಕ್ತಿಯ ಗುರುತನ್ನು ಇನ್ನೂ ರಹಸ್ಯವಾಗಿಯೇ ಇಟ್ಟಿದ್ದಾರೆ.
ಭಾರತದ ಪ್ರಮುಖ ಉದ್ಯಮ ಕುಟುಂಬವಾದ ಬಿರ್ಲಾ ಕುಟುಂಬದ ಕುಡಿಯಾಗಿರುವ ಅನನ್ಯಾ, ಸಂಗೀತ ಕ್ಷೇತ್ರದ ಜೊತೆಗೆ ಹಣಕಾಸು ಸೇವೆಗಳು, ಸೌಂದರ್ಯ ಉತ್ಪನ್ನಗಳು, ರಿಯಲ್ ಎಸ್ಟೇಟ್ ಹಾಗೂ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿ ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಇದೀಗ ಅವರು ಬಾಲಿವುಡ್ ಸಿನಿಮಾ ನಿರ್ಮಾಣಕ್ಕೂ ಕಾಲಿಟ್ಟಿದ್ದು, ಇಮ್ತಿಯಾಜ್ ಅಲಿ ನಿರ್ದೇಶನದ, ದಿಲ್ಜಿತ್ ದೋಸಾಂಜ್, ನಸೀರುದ್ದೀನ್ ಶಾ, ಶಾರ್ವರಿ ಹಾಗೂ ವೇದಾಂಗ್ ರೈನಾ ನಟನೆಯ ಮೇನ್ ವಾಪಸ್ ಆವೂಂಗಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದಲ್ಲದೆ, ರಣವೀರ್ ಸಿಂಗ್ ಅಭಿನಯದ, ಜೈ ಮೆಹ್ತಾ ನಿರ್ದೇಶನದ ಮುಂಬರುವ ಝಾಂಬಿ ಥ್ರಿಲ್ಲರ್ ಸಿನಿಮಾ ಪ್ರಳಯ್ ಚಿತ್ರಕ್ಕೂ ಇವರೇ ನಿರ್ಮಾಪಕಿಯಾಗಿದ್ದು, ಇದು ಅದ್ಭುತ ದೃಶ್ಯಾನುಭವ ನೀಡುವ ಸಿನಿಮಾ ಎಂದು ಶೋನಲ್ಲಿ ಬಣ್ಣಿಸಿದ್ದಾರೆ.
ಒಬ್ಬನೇ ವ್ಯಕ್ತಿಯಿಂದ ಪದೇ ಪದೇ ಬಂದ ಮದುವೆ ಪ್ರಸ್ತಾಪದ ಬಗ್ಗೆ ಅನನ್ಯಾ ನೀಡಿದ ಈ ಒಂದು ಸುಳಿವು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಬೇಕಿದೆ.