ಸಲ್ಮಾನ್ ಖಾನ್ ಅವರಿಂದ ರಕ್ಷಣೆ ನೀಡಲು ಐಶ್ವರ್ಯಾ ರೈ ಅವರಿಗೆ ನೇಮಕವಾಗಿದ್ದ ವಿಶೇಷ ಬಾಡಿಗಾರ್ಡ್ ಕೇತನ್ ಕರಂಡೆ 
ಬಾಲಿವುಡ್

ಸಲ್ಲು ಭಯಕ್ಕೆ ಐಶ್ವರ್ಯಾಗೆ ಸ್ಪೆಷಲ್ ಬಾಡಿಗಾರ್ಡ್: ಅವನ ಕಾರಣದಿಂದಲೇ ನಾನು ಕೆಲಸ ಬಿಟ್ಟೆ; 'ಐಶ್​' ಮಾಜಿ ಅಂಗರಕ್ಷಕ ಬಿಚ್ಚಿಟ್ಟ ಕರಾಳ ಸತ್ಯವೇನು? Ketan Karande

ಮುಂಬೈ: ಬಾಲಿವುಡ್‌ನ ಅತ್ಯಂತ ಚರ್ಚಿತ ಮತ್ತು ವಿವಾದಿತ ಪ್ರೇಮಕಥೆಗಳಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಡುವಿನ ಸಂಬಂಧವೂ ಒಂದು. ಇವರಿಬ್ಬರು ದೂರವಾಗಿ ಎರಡು ದಶಕಗಳೇ ಕಳೆದಿದ್ದರೂ, ಆ ಕಾಲದ ಕಹಿ ಘಟನೆಗಳು ಒಂದೊಂದಾಗಿ ಈಗಲೂ ಸದ್ದು ಮಾಡುತ್ತಲೇ ಇರುತ್ತವೆ.

ಇದೀಗ, 2002ರ ಸಮಯದಲ್ಲಿ ಐಶ್ವರ್ಯಾ ರೈ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದ್ದ ಕೇತನ್ ಕರಂಡೆ, ಸಲ್ಮಾನ್ ಖಾನ್ ಭಯದಿಂದ ಐಶ್ವರ್ಯಾಗೆ ರಕ್ಷಣೆ ನೀಡಲು ತಮ್ಮನ್ನು ಹೇಗೆ ನೇಮಿಸಲಾಗಿತ್ತು ಎಂಬ ರೋಚಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಸಲ್ಮಾನ್‌ನಿಂದ ರಕ್ಷಿಸಲು 7 ದಿನಗಳ ಸ್ಪೆಷಲ್ ಡ್ಯೂಟಿ!

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೇತನ್ ಕರಂಡೆ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. 2002ರಲ್ಲಿ ರೋಹನ್ ಸಿಪ್ಪಿ ನಿರ್ದೇಶನದ ಕುಚ್ ನಾ ಕಹೋ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಜೊತೆ ನಟಿಸುವುದು ಸಲ್ಮಾನ್ ಖಾನ್‌ಗೆ ಇಷ್ಟವಿರಲಿಲ್ಲ ಎಂದು ಕರಂಡೆ ಹೇಳಿದ್ದಾರೆ.

"ಆ ಸಮಯದಲ್ಲಿ ಸಲ್ಮಾನ್ ಖಾನ್ ಕಾರಣದಿಂದಲೇ ನನ್ನನ್ನು ಐಶ್ವರ್ಯಾ ರೈ ಅವರ ಬಾಡಿಗಾರ್ಡ್ ಆಗಿ ನೇಮಿಸಲಾಗಿತ್ತು. ಸಲ್ಮಾನ್ ಅವರಿಂದ ಐಶ್ವರ್ಯಾಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಏಳು ದಿನಗಳ ಕಾಲ ನನಗೆ ಈ ವಿಶೇಷ ಜವಾಬ್ದಾರಿ ನೀಡಲಾಗಿತ್ತು. ಅವರನ್ನು ಮನೆಯಿಂದ ಕರೆತರುವುದು ಮತ್ತು ಶೂಟಿಂಗ್ ಸೆಟ್‌ಗೆ ಸುರಕ್ಷಿತವಾಗಿ ಬಿಡುವುದು ನನ್ನ ಕೆಲಸವಾಗಿತ್ತು," ಎಂದು ಕೇತನ್ ತಿಳಿಸಿದ್ದಾರೆ.

ಸಲ್ಮಾನ್​ ಕಾರಣದಿಂದ ಕೆಲಸ ಬಿಟ್ಟೆ!

ಒಮ್ಮೆ ಐಶ್ವರ್ಯಾ ಅವರು ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದಾಗ, ದಾರಿಯಲ್ಲಿ ಸಲ್ಮಾನ್ ಖಾನ್ ಎದುರಾದರಂತೆ. ಈ ಘಟನೆಯ ಬೆನ್ನಲ್ಲೇ ಕೇತನ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಇದಕ್ಕೆ ಕಾರಣವನ್ನೂ ತಿಳಿಸಿರುವ ಅವರು, ನಾನು ಸಲ್ಮಾನ್ ಮತ್ತು ಐಶ್ವರ್ಯಾ ಇಬ್ಬರಿಗೂ ದೊಡ್ಡ ಅಭಿಮಾನಿ. ಇವರಿಬ್ಬರ ವೈಯಕ್ತಿಕ ಜಗಳದ ನಡುವೆ ಸಿಲುಕಿಕೊಳ್ಳಲು ನನಗೆ ಇಷ್ಟವಿರಲಿಲ್ಲ, ಹಾಗಾಗಿ ಕೆಲಸ ಬಿಟ್ಟೆ, ಎಂದಿದ್ದಾರೆ.

'ಚಲ್ತೆ ಚಲ್ತೆ' ಸೆಟ್‌ನಲ್ಲಿ ಗಲಾಟೆ; ಕೈತಪ್ಪಿದ ದೊಡ್ಡ ಸಿನಿಮಾಗಳು

ಶಾರುಖ್ ಖಾನ್ ಜೊತೆಗಿನ ಚಲ್ತೆ ಚಲ್ತೆ ಸಿನಿಮಾದ ಶೂಟಿಂಗ್ ಸೆಟ್‌ಗೆ ನುಗ್ಗಿದ್ದ ಸಲ್ಮಾನ್, ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ಗಲಾಟೆ ಮಾಡಿ ಚಿತ್ರೀಕರಣವನ್ನೇ ನಿಲ್ಲಿಸಿದ್ದರು. ಈ ರಾದ್ಧಾಂತದಿಂದ ಬೇಸತ್ತ ಚಿತ್ರತಂಡ ಐಶ್ವರ್ಯಾ ಅವರನ್ನು ಸಿನಿಮಾದಿಂದಲೇ ಕೈಬಿಟ್ಟಿತ್ತು. ಅಷ್ಟೇ ಅಲ್ಲ, ಇದೇ ಕಾರಣಕ್ಕೆ ಶಾರುಖ್ ಅವರ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ವೀರ್-ಜಾರಾ ಮತ್ತು ಮೇ ಹೂಂ ನಾ ಸಿನಿಮಾಗಳು ಐಶ್ವರ್ಯಾ ಕೈತಪ್ಪಿ ಹೋಗಿದ್ದವು.

ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದ ಸಲ್ಮಾನ್!

ಐಶ್ವರ್ಯಾ ವಿಚಾರದಲ್ಲಿ ಖ್ಯಾತ ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕಡ್ ಕೂಡ ಈ ಹಿಂದೆ ಸಲ್ಮಾನ್ ವರ್ತನೆ ಬಗ್ಗೆ ಮಾತನಾಡಿದ್ದರು. ಸಲ್ಮಾನ್ ಅತಿಯಾದ ಹಠಮಾರಿ ಮತ್ತು ಅನಾರೋಗ್ಯಕರ ವ್ಯಾಮೋಹ ಹೊಂದಿದ್ದರು. ಅವರು ಐಶ್ವರ್ಯಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು. ನಾನು ಅದೇ ಬಿಲ್ಡಿಂಗ್‌ನಲ್ಲಿ ಇದ್ದಿದ್ದರಿಂದ ಎಲ್ಲವನ್ನೂ ಕಣ್ಣಾರೆ ನೋಡಿದ್ದೆ.

ಸಲ್ಮಾನ್ ಕಟ್ಟಡದ ಪ್ರವೇಶ ದ್ವಾರದಲ್ಲಿ ನಿಂತು ಗಲಾಟೆ ಮಾಡುತ್ತಿದ್ದರು, ಗೋಡೆಗೆ ತಮ್ಮ ತಲೆಯನ್ನು ಬಡಿದುಕೊಳ್ಳುತ್ತಿದ್ದರು. ಬ್ರೇಕ್-ಅಪ್ ಆದ ಮೇಲೆ ಐಶ್ವರ್ಯಾ ಮತ್ತು ಅವರ ಪೋಷಕರು ದೊಡ್ಡ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ, ಇಂಡಸ್ಟ್ರಿಯಲ್ಲಿ ಎಲ್ಲರೂ ಸಲ್ಮಾನ್ ಪರ ನಿಂತಿದ್ದು ಐಶ್ವರ್ಯಾಗೆ ತುಂಬಾ ನೋವು ತಂದಿತ್ತು, ಎಂದು ಕಕ್ಕಡ್ ಬಹಿರಂಗಪಡಿಸಿದ್ದರು, (ಏಜೆನ್ಸೀಸ್​).