

ನವದೆಹಲಿ: ಕೋಳಿ ಸಾಕಣೆ ಉದ್ಯಮಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದ ಮಾರಕ ಬರ್ಡ್ ಫ್ಲೂ (H5N1 ಹಕ್ಕಿ ಜ್ವರ) ವಿರುದ್ಧ ಭಾರತ ಇದೀಗ ತನ್ನದೇ ಆದ ಸ್ವದೇಶಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ.
ಇಷ್ಟು ದಿನ ವಿದೇಶಿ ಲಸಿಕೆಗಳನ್ನೇ ನಂಬಿಕೊಂಡಿದ್ದ ಭಾರತ, ಈಗ ಸ್ವಾವಲಂಬಿಯಾಗಿದೆ. ಭೋಪಾಲ್‌ನಲ್ಲಿರುವ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (NIHSAD) ಸಂಸ್ಥೆಯ ವಿಜ್ಞಾನಿಗಳು ಈ ಹೊಸ ಲಸಿಕೆಯನ್ನು ಕಂಡುಹಿಡಿದಿದ್ದಾರೆ. ಭೋಪಾಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಮಹತ್ವದ ಲಸಿಕೆಯನ್ನು ಅಧಿಕೃತವಾಗಿ ದೇಶಕ್ಕೆ ಅರ್ಪಿಸಿದ್ದಾರೆ.
ಈ ಸ್ವದೇಶಿ ಲಸಿಕೆ ತಯಾರಿಕೆಯ ಹಿಂದೆ ಭಾರತೀಯ ವಿಜ್ಞಾನಿಗಳ ಸತತ ಒಂದು ವರ್ಷದ ಕಠಿಣ ಶ್ರಮವಿದೆ. ಪ್ರಧಾನ ವಿಜ್ಞಾನಿ ಡಾ. ಎಸ್. ನಾಗರಾಜನ್ ಅವರ ನೇತೃತ್ವದಲ್ಲಿ ಎಂಟು ವಿಜ್ಞಾನಿಗಳ ತಂಡ 2025ರ ಸೆಪ್ಟೆಂಬರ್‌ನಲ್ಲಿ ಈ ಸಂಶೋಧನೆಯನ್ನು ಆರಂಭಿಸಿತ್ತು. ಡಾ. ಮನೋಜ್ ಕುಮಾರ್, ಡಾ. ಸಿ. ಟೋಷ್, ಡಾ. ಎಚ್. ವಿ. ಮುರುಗಕರ್, ಡಾ. ಅನಿಕೇತ್ ಸನ್ಯಾಲ್, ಡಾ. ಸೆಂಥಿಲ್‌ಕುಮಾರ್ ಡಿ., ಡಾ. ನವೀನ್ ಕುಮಾರ್ ಹಾಗೂ ಡಾ. ಯೋಗಿಶಾರಾಧ್ಯ ಆರ್. ಈ ತಂಡದಲ್ಲಿದ್ದರು.
ವಿಶೇಷವಾಗಿ, ಭಾರತದ ಕೋಳಿ ಫಾರ್ಮ್‌ಗಳಿಗೆ ಅತಿ ಹೆಚ್ಚು ಅಪಾಯ ತಂದೊಡ್ಡಿದ್ದ H5N1 ವೈರಸ್‌ನ 'ಕ್ಲೇಡ್ 2.3.2.1a' (Clade 2.3.2.1a) ತಳಿಯನ್ನು ನೇರವಾಗಿ ಗುರಿಯಾಗಿಸಿಕೊಂಡು ಈ ಲಸಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹೊಸ ಲಸಿಕೆಯ ಅತಿದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಕೋಳಿಗಳಿಗೆ ಇದರ ಕೇವಲ ಒಂದು ಡೋಸ್ ನೀಡಿದರೆ ಸಾಕು, ಬರೋಬ್ಬರಿ ಆರು ತಿಂಗಳ ಕಾಲ ಕೋಳಿಗಳಿಗೆ ಹಕ್ಕಿ ಜ್ವರದ ವಿರುದ್ಧ ರಕ್ಷಣೆ ಸಿಗಲಿದೆ. ಮೊಟ್ಟೆ ಇಡುವ ಕೋಳಿಗಳು ಮತ್ತು ತಳಿ ಅಭಿವೃದ್ಧಿಗೆ ಸಾಕುವ ಕೋಳಿಗಳಿಗೆ ಇದು ವರದಾನವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಹಿಂದೆ ಬರ್ಡ್ ಫ್ಲೂ ಕಾಣಿಸಿಕೊಂಡರೆ, ಸೋಂಕು ಹರಡದಂತೆ ತಡೆಯಲು ಲಕ್ಷಾಂತರ ಕೋಳಿಗಳನ್ನು ಜೀವಂತವಾಗಿ ನಾಶಪಡಿಸುವುದು ಅನಿವಾರ್ಯವಾಗಿತ್ತು. ಸೋಂಕು ತಗುಲಿದ ಫಾರ್ಮ್‌ಗಳಲ್ಲಿ ಕೋಳಿಗಳ ಸಾವಿನ ಪ್ರಮಾಣ ಶೇ. 100ರಷ್ಟಿರುತ್ತಿತ್ತು, ಇದರಿಂದ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿತ್ತು. ಈಗ ರೋಗ ಬರುವ ಮೊದಲೇ ಲಸಿಕೆ ಹಾಕುವುದರಿಂದ ಈ ಭಾರಿ ನಷ್ಟವನ್ನು ತಪ್ಪಿಸಬಹುದಾಗಿದೆ.
ಬರ್ಡ್ ಫ್ಲೂ ಕೇವಲ ಕೋಳಿಗಳಿಗೆ ಮಾತ್ರ ಸೀಮಿತವಾದ ರೋಗವಲ್ಲ. NIHSAD ವಿಜ್ಞಾನಿಗಳ ಪ್ರಕಾರ, ಅತ್ಯಂತ ಅಪಾಯಕಾರಿ H5N1 ವೈರಸ್ ಪಕ್ಷಿಗಳಿಂದ ಮನುಷ್ಯರಿಗೂ ಹರಡುವ ಭೀತಿ ಇರುತ್ತದೆ. ಕೋಳಿಗಳಿಗೆ ಸಕಾಲದಲ್ಲಿ ಈ ಸ್ವದೇಶಿ ಲಸಿಕೆ ನೀಡುವುದರಿಂದ ವೈರಸ್ ಹರಡುವಿಕೆಯನ್ನು ಆರಂಭದಲ್ಲೇ ಕಟ್ಟಿಹಾಕಬಹುದು. ಇದರಿಂದ ಮನುಷ್ಯರಿಗೆ ಸೋಂಕು ತಗುಲುವ ಅಪಾಯವೂ ತಪ್ಪಿದಂತಾಗುತ್ತದೆ.
ಒಟ್ಟಾರೆಯಾಗಿ, ಭೋಪಾಲ್ ವಿಜ್ಞಾನಿಗಳ ಈ ಆವಿಷ್ಕಾರವು ಭಾರತದ ಪಶುವೈದ್ಯಕೀಯ ಕ್ಷೇತ್ರದ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಅಲ್ಲದೆ, ಲಕ್ಷಾಂತರ ಕೋಳಿ ಸಾಕಣೆದಾರರ ಆರ್ಥಿಕ ಭದ್ರತೆಗೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಈ ಲಸಿಕೆ ದೊಡ್ಡ ಶಕ್ತಿಯಾಗಿ ನಿಲ್ಲಲಿದೆ, (ಏಜೆನ್ಸೀಸ್).