ಪನ್ನುನ್ ಹತ್ಯೆ ಸಂಚು: ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ಕೋರ್ಟ್! Gurpatwant Singh Pannun

A US federal court has sentenced Indian national Nikhil Gupta to more than 19 years in prison on charges of plotting the assassination of Khalistani militant Gurpatwant Singh Pannun.
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ ಅಮೆರಿಕದ ಫೆಡರಲ್ ನ್ಯಾಯಾಲಯ 19 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಿದೆ.
Published on: 

ನ್ಯೂಯಾರ್ಕ್: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ಪ್ರಜೆ ನಿಖಿಲ್ ಗುಪ್ತಾನಿಗೆ ಅಮೆರಿಕದ ಫೆಡರಲ್ ನ್ಯಾಯಾಲಯ 235 ತಿಂಗಳುಗಳ (19 ವರ್ಷಕ್ಕೂ ಹೆಚ್ಚು ಕಾಲ) ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನ ನ್ಯಾಯಾಧೀಶ ವಿಕ್ಟರ್ ಮರೆರೊ ಶುಕ್ರವಾರ (ನ.20) ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

80 ನಿಮಿಷಗಳ ವಿಚಾರಣೆ

ವರದಿಯ ಪ್ರಕಾರ, ಸತತ 80 ನಿಮಿಷಗಳ ಕಾಲ ನಡೆದ ವಿಚಾರಣೆಯ ನಂತರ ನ್ಯಾಯಾಧೀಶರು ಈ ಶಿಕ್ಷೆಯನ್ನು ಘೋಷಿಸಿದರು. ವಿಚಾರಣೆಯ ವೇಳೆ ಖುದ್ದು ಹಾಜರಿದ್ದ ಪನ್ನುನ್, ಈ ಹತ್ಯಾ ಸಂಚಿನಿಂದಾಗಿ ತಮ್ಮ ದೈನಂದಿನ ಕಾನೂನು ವೃತ್ತಿಜೀವನಕ್ಕೆ 1,200 ದಿನಗಳಿಗೂ ಹೆಚ್ಚು ಕಾಲ ಅಡ್ಡಿಯುಂಟಾಗಿದೆ ಎಂದು ಅಳಲು ತೋಡಿಕೊಂಡರು. ಮತ್ತೊಂದೆಡೆ, 55 ವರ್ಷದ ನಿಖಿಲ್ ಗುಪ್ತಾ ನ್ಯಾಯಾಲಯದಲ್ಲಿ ಸಂಕ್ಷಿಪ್ತವಾಗಿ ಮಾತನಾಡಿ, ಈ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸಿದರು.

24 ವರ್ಷ ಶಿಕ್ಷೆಗೆ ಪಟ್ಟು ಹಿಡಿದಿದ್ದ ಅಮೆರಿಕ ಸರ್ಕಾರ

ಈ ವರ್ಷದ ಆರಂಭದಲ್ಲೇ ನಿಖಿಲ್ ಗುಪ್ತಾ ತಮ್ಮ ಮೇಲಿನ ಮೂರು ಗಂಭೀರ ಆರೋಪಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ಹಣ ನೀಡಿ ಹತ್ಯೆ ಮಾಡಿಸುವ ಸಂಚು, ಹತ್ಯೆಗೆ ಒಳಸಂಚು ರೂಪಿಸುವುದು ಮತ್ತು ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಗಳಲ್ಲಿ ತಾವು ಭಾಗಿಯಾಗಿರುವುದಾಗಿ ಅವರು ತಪ್ಪೊಪ್ಪಿಗೆ ನೀಡಿದ್ದರು.

ಅಮೆರಿಕ ಸರ್ಕಾರದ ಅಭಿಯೋಜಕರು ಗುಪ್ತಾ ಅವರಿಗೆ ಬರೋಬ್ಬರಿ 24 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಕಳೆದ ವಾರ ಸಲ್ಲಿಸಲಾದ ದಾಖಲೆಗಳಲ್ಲಿ, ಗುಪ್ತಾ ಅವರ ಕೃತ್ಯವನ್ನು "ಅತ್ಯಂತ ಕ್ರೂರ ಮತ್ತು ನಿರ್ಭೀತ" ಎಂದು ಸರ್ಕಾರಿ ವಕೀಲರು ಬಣ್ಣಿಸಿದ್ದರು. ಅಲ್ಲದೆ, ಈ ಸಂಚಿನಲ್ಲಿ ಒಬ್ಬ ಭಾರತೀಯ ಸರ್ಕಾರಿ ಉದ್ಯೋಗಿ ಕೂಡ ಭಾಗಿಯಾಗಿದ್ದು, ಬಲಿಪಶುವಿನ ರಾಜಕೀಯ ಸಿದ್ಧಾಂತದ ಕಾರಣಕ್ಕಾಗಿ ಅಮೆರಿಕದ ನೆಲದಲ್ಲೇ ಅಮೆರಿಕನ್ ಪ್ರಜೆಯನ್ನು ಮುಗಿಸಲು ಸಂಚು ರೂಪಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದರು.

ಹಂತಕನ ಹುಡುಕಾಟದಲ್ಲಿ ಎಡವಿದ್ದೇ ಮುಳುವಾಯಿತು!

ನ್ಯಾಯಾಲಯದ ದಾಖಲೆಗಳು ಮತ್ತು ದೋಷಾರೋಪಣಾ ಪಟ್ಟಿಯ ಪ್ರಕಾರ, 2023ರಲ್ಲಿ ನಿಖಿಲ್ ಗುಪ್ತಾ ಭಾರತ ಮತ್ತು ಇತರ ಕಡೆಗಳಲ್ಲಿರುವ ಕೆಲವರೊಂದಿಗೆ ಸೇರಿ ಪನ್ನುನ್ ಹತ್ಯೆಗೆ ನೀಲನಕ್ಷೆ ತಯಾರಿಸಿದ್ದರು. ಈ ಪ್ರಕರಣದ ಸಹ-ಪ್ರತಿವಾದಿ ವಿಕಾಶ್ ಯಾದವ್ ಅವರ ಸೂಚನೆಯ ಮೇರೆಗೆ, ಗುಪ್ತಾ ನ್ಯೂಯಾರ್ಕ್ ನಗರದಲ್ಲಿ ಪನ್ನುನ್ ಅವರನ್ನು ಕೊಲ್ಲಲು ಒಬ್ಬ ವೃತ್ತಿಪರ ಹಂತಕನನ್ನು ಹುಡುಕಲು ಆರಂಭಿಸಿದ್ದರು.

Also Read
ಕೊಕೇನ್, ದುಬಾರಿ ಮದ್ಯ, ಡಾನ್ಸ್ ಪಾರ್ಟಿ; ದಾವೂದ್ ಇಬ್ರಾಹಿಂ ರಹಸ್ಯ ಬದುಕು ಬಿಚ್ಚಿಟ್ಟ ಮಾಜಿ FBI ಏಜೆಂಟ್! Dawood Ibrahim
A US federal court has sentenced Indian national Nikhil Gupta to more than 19 years in prison on charges of plotting the assassination of Khalistani militant Gurpatwant Singh Pannun.

ಆದರೆ, ಅಪರಾಧ ಜಗತ್ತಿನ ವ್ಯಕ್ತಿ ಎಂದು ನಂಬಿ ಗುಪ್ತಾ ಯಾರನ್ನು ಸಂಪರ್ಕಿಸಿದ್ದರೋ, ಅವರು ವಾಸ್ತವವಾಗಿ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಏಜೆನ್ಸಿಯ ಗೌಪ್ಯ ಮಾಹಿತಿದಾರರಾಗಿದ್ದರು. ಇದು ತಿಳಿಯದೆ ಗುಪ್ತಾ ಸಂಚನ್ನು ಮುಂದುವರಿಸಿದ್ದರು. ಕೊಲೆ ಮಾಡಲು ಒಬ್ಬ ಅಂಡರ್‌ಕವರ್ ಅಧಿಕಾರಿಗೆ 1,00,000 ಡಾಲರ್ ಹಣ ನೀಡಲು ವಿಕಾಶ್ ಯಾದವ್ ಒಪ್ಪಿಕೊಂಡಿದ್ದರು.

ಇದರ ಭಾಗವಾಗಿ 2023ರ ಜೂನ್ 9ರ ಸುಮಾರಿಗೆ, ಮುಂಗಡ ಹಣವಾಗಿ 15,000 ಡಾಲರ್ ನಗದನ್ನು ಸಹಚರನೊಬ್ಬನ ಮೂಲಕ ಆ ಅಧಿಕಾರಿಗೆ ತಲುಪಿಸಲಾಗಿತ್ತು. ಈ ಹಣದ ವಹಿವಾಟು ಮತ್ತು ಸಂಭಾಷಣೆಗಳೇ ಅಮೆರಿಕದ ತನಿಖಾ ಸಂಸ್ಥೆಗಳಿಗೆ ಪ್ರಬಲ ಸಾಕ್ಷ್ಯಗಳಾಗಿ ಸಿಕ್ಕಿದ್ದವು.

ಯಾರು ಈ ಗುರುಪತ್ವಂತ್ ಸಿಂಗ್ ಪನ್ನುನ್?

ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಗುರುಪತ್ವಂತ್ ಸಿಂಗ್ ಪನ್ನುನ್, ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಸ್ವಯಂಘೋಷಿತ ಜನರಲ್ ಕೌನ್ಸೆಲ್ ಆಗಿದ್ದಾನೆ. ಭಾರತ ವಿರೋಧಿ ಚಟುವಟಿಕೆಗಳು ಮತ್ತು ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಅಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿಯೂ ಈತನ ಹೆಸರಿದೆ, (ಏಜೆನ್ಸೀಸ್​).