ಸೀತೆಯ ಪಾತ್ರವನ್ನು ರಿಜೆಕ್ಟ್​ ಮಾಡಿದ್ರಾ ಕೆಜಿಎಫ್​ ಬ್ಯೂಟಿ? ಶ್ರೀನಿಧಿ ಶೆಟ್ಟಿ ಕೊಟ್ಟ ಸ್ಪಷ್ಟನೆ ಹೀಗಿದೆ...Ramayana  
ಬಾಲಿವುಡ್

ಸೀತೆಯ ಪಾತ್ರವನ್ನು ರಿಜೆಕ್ಟ್​ ಮಾಡಿದ್ರಾ ಕೆಜಿಎಫ್​ ಬ್ಯೂಟಿ? ಶ್ರೀನಿಧಿ ಶೆಟ್ಟಿ ಕೊಟ್ಟ ಸ್ಪಷ್ಟನೆ ಹೀಗಿದೆ...Ramayana

ಪ್ರಮುಖ ಮುಖ್ಯಾಂಶಗಳು

  • ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಭಾರಿ ಸಂಚಲನ ಸೃಷ್ಟಿಸಿದೆ
  • ಸೀತಾ ಪಾತ್ರದ ಆಡಿಷನ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಶ್ರೀನಿಧಿ ಶೆಟ್ಟಿ
  • ತಾನು ಪಾತ್ರ ತಿರಸ್ಕರಿಸಿಲ್ಲ ಬದಲಿಗೆ ಆಡಿಷನ್ ನೀಡಿದ್ದೆ ಎಂದ ಶ್ರೀನಿಧಿ
  • ಸಾಯಿ ಪಲ್ಲವಿ ಸೀತಾ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ನಟಿ
  • ದೀಪಾವಳಿ ಹಬ್ಬದ ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ರಾಮಾಯಣ
ಮುಂಬೈ: ಒಂದು ಮಹಾ ದೃಶ್ಯಕಾವ್ಯವಾಗಿ ಮೂಡಿಬರುತ್ತಿರುವ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಸಿನಿಮಾದ ( Ramayana ) ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಸೀತಾ ಪಾತ್ರದ ಆಯ್ಕೆ ಹಾಗೂ ನಟಿ ಶ್ರೀನಿಧಿ ಶೆಟ್ಟಿ ಅವರ ಸ್ಪಷ್ಟನೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದ ಟ್ರೈಲರ್​ ಜುಲೈ 30ರಂದು ಮುಂಜಾನೆ 4 ಗಂಟೆ 15 ನಿಮಿಷಕ್ಕೆ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿ ತನ್ನ ಅದ್ಭುತ ದೃಶ್ಯ ವೈಭವದಿಂದ ಕಣ್ಮನ ಸೆಳೆದಿದೆ. ರಾವಣನಾಗಿ ಕಾಣಿಸಿಕೊಂಡಿರುವ ಯಶ್ ಅವರ ಅಭಿನಯ ಹಾಗೂ ಲುಕ್ ಎಲ್ಲೆಡೆ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದರೆ, ಸೀತಾ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರಿಗೆ ಕೆಲವು ಕಡೆಗಳಿಂದ ಟೀಕೆಗಳು ಕೂಡ ವ್ಯಕ್ತವಾಗಿವೆ.
ಈ ನಡುವೆ, 'ರಾಮಾಯಣ' ಚಿತ್ರದಲ್ಲಿ ಸೀತಾ ಪಾತ್ರಕ್ಕಾಗಿ ನಿರ್ದೇಶಕರು ಈ ಮೊದಲು ನನ್ನನ್ನು ಸಂಪರ್ಕಿಸಿದ್ದರು ಮತ್ತು ನಾನೇ ಆ ಆಫರ್ ಅನ್ನು ತಿರಸ್ಕರಿಸಿದೆ ಎಂಬ ವರದಿಗಳ ಬಗ್ಗೆ ನಟಿ ಶ್ರೀನಿಧಿ ಶೆಟ್ಟಿ ತೆಲುಗು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾನು ಆ ಪಾತ್ರವನ್ನು ತಿರಸ್ಕರಿಸಿಲ್ಲ ಬದಲಿಗೆ ಸೀತಾ ಪಾತ್ರಕ್ಕಾಗಿ ಆಡಿಷನ್ ನೀಡಿದ್ದೆ ಆದರೆ, ದುರದೃಷ್ಟವಶಾತ್ ಆ ಪಾತ್ರ ತನಗೆ ಸಿಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೀತಾ ಎಂಬುದು ಯಾವುದೇ ನಟಿಯ ಕನಸಿನ ಪಾತ್ರವಾಗಿದ್ದು, ಅಂತಹ ಮಹಾನ್ ಪಾತ್ರಕ್ಕಾಗಿ ಆಡಿಷನ್ ಕರೆ ಬಂದಿರುವುದೇ ನನಗೆ ದೊಡ್ಡ ಗೌರವ ಎಂದಿರುವ ಶ್ರೀನಿಧಿ, ತಾನು ಎಂದಿಗೂ ಆ ಪಾತ್ರವನ್ನು ರಿಜೆಕ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ತಮಗೆ ಖುಷಿಯಿದೆ ಎಂದು ತಿಳಿಸುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್ನು ರಾಮಾಯಣ ಟ್ರೈಲರ್‌ನಲ್ಲಿ ರಾವಣನ ಪಟ್ಟಾಭಿಷೇಕ, ರಾಮನ ಪರಾಕ್ರಮ, ಸೀತಾ ಸ್ವಯಂವರ ಹಾಗೂ ಕಾಯ್ಕೇಯಿ ಬೇಡಿಕೆಯ ಪ್ರಮುಖ ದೃಶ್ಯಗಳು ಗಮನ ಸೆಳೆದಿವೆ. ದೀಪಾವಳಿ ಹಬ್ಬದ ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಮತ್ತು ರಾಮಭಕ್ತರಲ್ಲಿ ಭಾರೀ ನಿರೀಕ್ಷೆ ಮೂಡಿದೆ, (ಏಜೆನ್ಸೀಸ್​).