ಸಿನಿವಾಣಿ

ಶೂಟಿಂಗ್​ಗೆ ಗ್ರೀನ್​ ಸಿಗ್ನಲ್​ ... ಹೈದರಾಬಾದ್​ನತ್ತ ಓಡುತ್ತಿದ್ದಾರೆ ಬಾಲಿವುಡ್​ ಮಂದಿ

ಲಾಕ್​ಡೌನ್​ನಿಂದ ಇಡೀ ದೇಶದಲ್ಲಿ ಚಿತ್ರೀಕರಣ ಚಟುವಟಿಕೆಗಳು ನಿಂತು ಎರಡೂವರೆ ತಿಂಗಳುಗಳಾಗಿವೆ. ಇದೀಗ ಲಾಕ್​ಡೌನ್​ ತೆರವಾಗಿದ್ದು, ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಎಲ್ಲಾ ಚಿತ್ರರಂಗಗಳು ಮನವಿ ಮಾಡುತ್ತಿವೆ. ಈ ಪೈಕಿ ತೆಲಂಗಾಣದ ಕೆಸಿಆರ್​ ಸರ್ಕಾರವು, ತಕ್ಷಣದಿಂದ ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದೂ ಆಗಿದೆ.

ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ಕೊಟ್ಟಿರುವುದರ ಬಗ್ಗೆ ಖುಷಿಯಾಗಿರುವುದು ಟಾಲಿವುಡ್​ ಮಾತ್ರವಲ್ಲ, ಬೇರೆ ಚಿತ್ರರಂಗದವರೂ ಬಹಳ ಖುಷಿಯಾಗಿದ್ದಾರೆ. ಅದರಲ್ಲೂ ಬಾಲಿವುಡ್​ನವರು ಬಹಳ ಖುಷಿಯಾಗಿದ್ದು, ಶೂಟಿಂಗ್​ ಮಾಡುವುದಕ್ಕೆ ಹೈದರಾಬಾದ್​ಗೆ ಓಡುತ್ತಿದ್ದಾರೆ.

ಹೌದು, ತೆಲಂಗಾಣ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಚಿತ್ರೀಕರಣ ಮಾಡುವುದಕ್ಕೆ ಅನುಮತಿಯನ್ನು ಕೊಟ್ಟಿಲ್ಲ. ಶೂಟಿಂಗ್​ ಪ್ರಾರಂಭಿಸುವುದಕ್ಕೆ ಯಾವಾಗಿನಿಂದ ಅನುಮತಿ ಸಿಗುತ್ತದೆ ಎಂಬುದು ಸಹ ಗೊತ್ತಿಲ್ಲ. ಅದರಲ್ಲೂ ಬಾಲಿವುಡ್​ನಲ್ಲಂತೂ ದೊಡ್ಡದೊಡ್ಡ ಚಿತ್ರಗಳು ಅರ್ಧದಲ್ಲೇ ನಿಂತಿರುವುದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗದಿದ್ದರೆ ಬೇಡ, ತೆಲಂಗಾಣಕ್ಕೆ ಹೋಗಿ ಚಿತ್ರೀಕರಣ ಮಾಡಿ ಬರುತ್ತೇವೆ ಎಂದು ತಯಾರಿ ನಡೆಸಿದ್ದಾರೆ.

ಈ ಪೈಕಿ ಸಂಜಯ್​ ಗುಪ್ತಾ ನಿರ್ದೇಶನದ ಮುಂಬೈ ಸಾಗಾ ಚಿತ್ರವು ಮೊದಲ ಸಾಲಿನಲ್ಲಿದೆ. ಮುಂಬೈನ ರಕ್ತಸಿಕ್ತ ಇತಿಹಾಸವನ್ನು ಸಾರುವ ಈ ಚಿತ್ರ ಕಳೆದ ವರ್ಷ ಪ್ರಾರಂಭವಾಗಿತ್ತು. ಜಾನ್​ ಅಬ್ರಹಾಂ, ಇಮ್ರಾನ್​ ಹಶ್ಮೀ, ಪ್ರತೀಕ್​ ಬಬ್ಬರ್​, ಸುನೀಲ್​ ಶೆಟ್ಟಿ, ಜಾಕಿ ಶ್ರಾಫ್​, ಕಾಜಲ್​ ಅಗರ್​ವಾಲ್​ ಸೇರಿದಂತೆ ಹಲವು ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಇನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಿದರೆ ಪೂರ್ತಿಯಾಗುತಿತ್ತು. ಲಾಕ್​ಡೌನ್​ ಇಲ್ಲದಿದ್ದರೆ, ಇಷ್ಟರಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗುತಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರತಂಡದ ಪ್ಲಾನ್​ ಹಾಳಾಯಿತು.

ಇದೀಗ ತೆಲಂಗಾಣದಲ್ಲಿ ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ಮುಖ್ಯಮಂತ್ರಿ ಕೆಸಿಆರ್​ ಗ್ರೀನ್​ ಸಿಗ್ನಲ್​ ನೀಡಿರುವುದರಿಂದ, ಅಲ್ಲಿಗೆ ಹೋಗಿ ಬಾಕಿ ಉಳಿದಿರುವ ಭಾಗದ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಹೇಗೂ ರಾಮೋಜಿ ಫಿಲಂ ಸಿಟಿಯಲ್ಲಿ ಎಲ್ಲಾ ವ್ಯವಸ್ಥೆ ಇದೆ. ಅಷ್ಟೇ ಅಲ್ಲ, ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಡಲಾಗುತ್ತದೆ. ಹಾಗಾಗಿ ಚಿತ್ರತಂಡದ ಆಯ್ದ ಸದಸ್ಯರು ಮಾತ್ರ ರಾಮೋಜಿ ಫಿಲಂ ಸಿಟಿಗೆ ಹೋಗಿ ಅಲ್ಲಿ ಚಿತ್ರೀಕರಣ ಯಾಕೆ ಮಾಡಬಾರದು ಎಂದು ಯೋಚಿಸಿ, ಸದ್ಯದಲ್ಲೇ ಅಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಬರೀ ಮುಂಬೈ ಸಾಗಾ ಮಾತ್ರವಲ್ಲ, ಬೇರೆ ಚಿತ್ರತಂಡಗಳು ಸಹ ಆದಷ್ಟು ಬೇಗ ಹೈದರಾಬಾದ್​ಗೆ ಹೋಗಿ ಅಲ್ಲಿ ಚಿತ್ರೀಕರಣ ನಡೆಸುವುದಕ್ಕೆ ಸಜ್ಜಾಗುತ್ತಿವೆ. ಹೀಗೇ ಮುಂದುವರೆದರೆ, ಬಹುಶಃ ತೆಲುಗು ಚಿತ್ರಗಳಿಗಿಂಥ ಹೈದರಾಬಾದ್​ನಲ್ಲಿ ಹಿಂದಿ ಚಿತ್ರಗಳ ಚಿತ್ರೀಕರಣವೇ ಹೆಚ್ಚು ನಡೆದರೆ ಆಶ್ಚರ್ಯವಿಲ್ಲ.