ಕೆಲವು ವರ್ಷಗಳಿಂದ ಬ್ರೇಕ್‌ನಲ್ಲಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಸದ್ಯ ಕನ್ನಡದಲ್ಲೂ ಧ್ರುವ ಸರ್ಜಾ ನಾಯಕನಾಗಿರುವ, ಪ್ರೇಮ್ ನಿರ್ದೇಶಿಸುತ್ತಿರುವ ‘ಕೆಡಿ’ ಚಿತ್ರದಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ. ಅದರ ಜತೆಗೆ ಅವರು ನಟಿಸಿರುವ ಮತ್ತೊಂದು ಸಿನಿಮಾ ‘ಸುಖೀ’ ಟ್ರೇಲರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ.
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಸುಖೀ ಅಲಿಯಾಸ್ ಸುಖ್‌ಪ್ರೀತ್ ಕಾಲ್ರಾ ಎಂಬ ಪಂಜಾಬಿ ಮಹಿಳೆಯ ಪಾತ್ರದಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಇತ್ತೀಚೆಗೆ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ, ‘ನಾಯಕಿಯಾಗಿ ನಟಿಸಿದರೆ ಸಿನಿಮಾ ಜವಾಬ್ದಾರಿ ನಮ್ಮ ಮೇಲೆಯೇ ಇರುತ್ತದೆ, ಒತ್ತಡವೂ ಹೆಚ್ಚು. ಜತೆಗೆ ಬಾಕ್ಸಾಫೀಸ್ ಗಳಿಕೆಯ ಮೇಲೆ ನಿಮ್ಮ ಮೌಲ್ಯವನ್ನು ಅಳೆಯಲಾಗುತ್ತದೆ. ಹೀಗಾಗಿಯೇ ನಾನು ಒಪ್ಪುತ್ತಿಲ್ಲ’ ಎಂದು 48 ವರ್ಷದ ಶಿಲ್ಪಾ ಹೇಳಿಕೊಂಡಿದ್ದಾರೆ.
ಸೋನಲ್ ಜೋಶಿ ನಿರ್ದೇಶಿಸುತ್ತಿರುವ ‘ಸುಖೀ’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಜತೆ ಕುಶಾ ಕಪಿಲ, ದಿಲ್ನಾಜ್ ಇರಾನಿ, ಪವ್ರೀನ್ ಗುಜ್ರಾಲ್, ಚೈತನ್ಯ ಚೌಧರಿ, ಅಮಿತ್ ಸಧ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿನಿಮಾ ಇದೇ ತಿಂಗಳ 22ರಂದು ರಿಲೀಸ್ ಆಗಲಿದೆ.
-ಏಜೆನ್ಸೀಸ್