ಸಿನಿವಾಣಿ

ಅಂದು 28 ಕೆಜಿ ತೂಕ ಇಳಿಸಿಕೊಂಡಿದ್ದರು, ಇಂದು 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಆ ನಟಿ ಯಾರು ಗೊತ್ತಾ?

ಚಿತ್ರರಂಗದಲ್ಲಿ ನಟ, ನಟಿಯರು ಪಾತ್ರಗಳಿಗಾಗಿ ತೂಕ ಹೆಚ್ಚಿಸಿಕೊಳ್ಳುವುದು, ಕಡಿಮೆ ಮಾಡಿಕೊಳ್ಳುವುದು ಕಾಮನ್​. ಇದೀಗ ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಸಹ ಅದೇ ಕಸರತ್ತು ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ಸಪೂರ ಕಾಣಲು ಬರೋಬ್ಬರಿ 28 ಕೆಜಿ ತೂಕ ಇಳಿಸಿಕೊಂಡಿದ್ದ ಈ ಚೆಲುವೆ, ಕಳೆದ ವರ್ಷ ಪಾತ್ರವೊಂದಕ್ಕಾಗಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಮತ್ತೆ ಜಿಮ್​ ಸೇರಿರುವ ಅವರು, ಮತ್ತೊಮ್ಮೆ ತೂಕ ಇಳಿಸಿಕೊಳ್ಳಲು ಭರ್ಜರಿಯಾಗಿ ಬೆವರು ಹರಿಸುತ್ತಿದ್ದಾರೆ.

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಸದ್ಯ ತಮ್ಮ ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ತೂಕ ಎತ್ತುತ್ತಿದ್ದಾರೆ. ಅದಕ್ಕೆ ಎರಡು ಕಾರಣಗಳು. ಮೊದಲನೆಯದು ‘ಅಮರ್ ಸಿಂಗ್ ಚಮ್ಕೀಲಾ’ ಸಿನಿಮಾ ಮತ್ತೊಂದು ಮದುವೆ. ಹೌದು, ಕಳೆದ ವರ್ಷ ಇಮ್ತಿಯಾಜ್ ಅಲಿ ನಿರ್ದೇಶಿಸುತ್ತಿರುವ ‘ಚಮ್ಕೀಲಾ’ ಚಿತ್ರಕ್ಕಾಗಿ ಪರಿಣೀತಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ‘ಅಮರ್ ಸಿಂಗ್ ಚಮ್ಕೀಲಾ’ ಪಂಜಾಬ್‌ನ ಖ್ಯಾತ ಜಾನಪದ ಗಾಯಕ. 1988ರಲ್ಲಿ ಪತ್ನಿ ಅಮರ್‌ಜೋತ್ ಜತೆ ಅವರನ್ನು ಕೆಲವರು ಬಂದೂಕುಧಾರಿಗಳು ಹತ್ಯೆ ಮಾಡಿದ್ದರು. ಚಮ್ಕೀಲಾ ಪಾತ್ರದಲ್ಲಿ ದಿಲ್ಜಿತ್ ದೊಸಂಝ್ ನಟಿಸಿದ್ದು, ಅಮರ್‌ಜೋತ್ ಆಗಿ ಪರಿಣೀತಿ ನಟಿಸಿದ್ದಾರೆ.

ಸಿನಿಮಾ ಚಿತ್ರೀಕರಣದ ಬಳಿಕ ಪರಿಣೀತಿ, ಮದುವೆಯ ಸಿದ್ದತೆಯಲ್ಲಿ ತೊಡಗಿದರು. ಕಳೆದ ಮೇ 13ರಂದು ನಿಶ್ಚಿತಾರ್ಥ ಮಾಡಿಕೊಂಡ ಜೋಡಿ, ಸೆಪ್ಟೆಂಬರ್ 24ರಂದು ಅದ್ದೂರಿಯಾಗಿ ಹಸೆಮಣೆ ಏರಿತು. ಹೀಗಾಗಿ ಡಯಟ್, ಫಿಟ್ನೆಸ್ ಬಗ್ಗೆ ಪರಿಣೀತಿ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಸಿನಿಮಾಗಳಲ್ಲಿ ಬಿಜಿಯಾಗಲಿರುವ ಕಾರಣ ಅವರು ಮತ್ತೊಮ್ಮೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅಂದಹಾಗೆ, 2011ರಲ್ಲಿ ‘ಲೇಡೀಸ್ ವರ್ಸಸ್ ರಿಕ್ಕಿ ಬೆಹ್ಲ್’ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದ್ದ ಪರಿಣೀತಿ, ಆಗ 28 ಕೆಜಿ ತೂಕ ಇಳಿಸಿಕೊಂಡಿದ್ದರು.