ಸಿನಿವಾಣಿ

ಔರಂಗಜೇಬ್​ ಪಾತ್ರದಲ್ಲಿ ಬಾಬ್ಬಿ ಡಿಯೋಲ್​; ವೀರಮಲ್ಲು ಜತೆಗೆ ಕ್ಲ್ಯಾಶ್​​

ಮುಂಬೈ: ಬಾಲಿವುಡ್​ ನಟ ಬಾಬ್ಬಿ ಡಿಯೋಲ್​ ಇದೇ ಮೊದಲ ಬಾರಿಗೆ ಹಿಂದಿ ಬಿಟ್ಟು, ಇನ್ನೊಂದು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಬಾಬ್ಬಿ, ಟಾಲಿವುಡ್​ನ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಆ ಚಿತ್ರದಲ್ಲಿ ಔರಂಗಜೇಬ್​ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ.

ಅಂದಹಾಗೆ: ಬಾಬ್ಬಿ ಡಿಯೋಲ್​ ನಟಿಸುತ್ತಿರುವುದು 'ಹರಿಹರ ವೀರಮಲ್ಲು' ಚಿತ್ರದಲ್ಲಿ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು. ವೀರಮಲ್ಲು ಪಾತ್ರದಲ್ಲಿ ಪವನ್​ ಕಲ್ಯಾಣ್​ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಅರ್ಧ ಭಾಗದ ಚಿತ್ರೀಕರಣ ಸಹ ಮುಗಿದಿದ್ದು, ಔರಂಗಜೇಬನ ಪಾತ್ರ ಮಾಡುವುದಕ್ಕೆ ಬಾಬ್ಬಿ ಡಿಯೋಲ್​ ಆಯ್ಕೆಯಾಗಿದ್ದಾರೆ.

ಮುಂಚೆ, ಇದೇ ಪಾತ್ರಕ್ಕೆ ಬಾಲಿವುಡ್​ ನಟ ಅಜುಘನ್​ ರಾಂಪಾಲ್​ ಕಾಣಿಸಿಕೊಳ್ಳಬೇಕಿತ್ತಂತೆ. ಅವರು ಒಪ್ಪಿ ಕಾಲ್​ಶೀಟ್​ ಸಹ ನೀಡಿದ್ದರಂತೆ. ಆದರೆ, ಪವನ್​ ಕಲ್ಯಾಣ್​ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ, ಚಿತ್ರೀಕರಣ ಮುಂದಕ್ಕೆ ಹೋಗಿದೆ. ಬೇರೆ ಚಿತ್ರಗಳಲ್ಲೂ ನಟಿಸುತ್ತಿರುವ ಅರ್ಜುನ್​ಗೆ ಸಮಸ್ಯೆ ಎದುರಾಗಿದೆ. ಕೊನೆಗೆ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ.

ಅರ್ಜುನ್​ ಬಿಟ್ಟ ಪಾತ್ರ ಇದೀಗ ಬಾಬ್ಬಿ ಡಿಯೋಲ್​ಗೆ ಸಿಕ್ಕಿದೆ. ಬಾಬ್ಬಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರೂ, ಚಿತ್ರತಂಡದವರು ಅಗ್ರೀಮೆಂಟ್​ ಮಾಡಿಕೊಂಡಿಲ್ಲ. ಏಕೆಂದರೆ, ಪವನ್​ ಕಲ್ಯಾಣ್ ಯಾವಾಗ ಚಿತ್ರೀಕರಣಕ್ಕೆ ಬರುತ್ತಾರೆ ಎಂದು ಗೊತ್ತಿಲ್ಲ. ಇವರ ಕಾಲ್​ಶೀಟ್​ ಪಡೆದು, ಅವರು ಬರದಿದ್ದರೆ ಮತ್ತೆ ಸಮಸ್ಯೆ ಆಗಬಹುದು, ಇನ್ನೊಬ್ಬ ನಟನನ್ನು ಹುಡುಕಬೇಕಾಗಬಹುದು ಎಂಬ ಭಯಕ್ಕೆ, ಪವನ್​ ಕಲ್ಯಾಣ್​ ಕಾಲ್​ಶೀಟ್​ ಸಿಕ್ಕ ಮೇಲಷ್ಟೇ ಬಾಬ್ಬಿ ಡಿಯೋಲ್​ ಅವರನ್ನು ಸಂಪರ್ಕಿಸುವುದಕ್ಕೆ ಯೋಚಿಸಿದ್ದಾರೆ ಎಂದು ಹೇಳಲಾಗಿದೆ.