ಸಿನಿವಾಣಿ

ಅಂಧ ನಿರ್ದೇಶಕರ ನಿಶಾಚರ; ಶಬ್ದ ಗ್ರಹಿಸಿ ಆ್ಯಕ್ಷನ್-ಕಟ್ ಹೇಳಿದ ಭಾಸ್ಕರ್

ಬೆಂಗಳೂರು: ‘ಎದ್ದೇಳು ಮಂಜುನಾಥ’ ಚಿತ್ರ ನೆನಪಿರಬಹುದು. ಆ ಚಿತ್ರದಲ್ಲಿ ತಬಲಾ ನಾಣಿ ಅವರದ್ದು ಅಂಧನ ಪಾತ್ರ. ಚಿತ್ರ ನಿರ್ದೇಶನ ಮಾಡಬೇಕು ಎಂಬ ಆಸೆ ಹೊತ್ತು ಅವರು ಚಿತ್ರರಂಗಕ್ಕೆ ಬಂದಿರುತ್ತಾರೆ. ಆದರೆ, ಅವರ ಕನಸು ಕೊನೆಗೂ ನನಸಾಗುವುದಿಲ್ಲ. ಈಗ ಭಾಸ್ಕರ್ ಎಂಬ ವಿಶೇಷಚೇತನ ವ್ಯಕ್ತಿಯೊಬ್ಬರು ‘ನಿಶಾಚರ’ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಾಫ್ಟ್ ವೇರ್ ಕೆಲಸದಲ್ಲಿದ್ದ ನನಗೆ 2005ರಲ್ಲಿ ಕಣ್ಣಿನ ನರದೌರ್ಬಲ್ಯ ಕಾಡತೊಡಗಿತು. ಕ್ರಮೇಣ ಸಂಪೂರ್ಣ ದೃಷ್ಟಿಯೇ ಕಳೆದುಹೋಯಿತು. ಮೊದಲಿಂದಲೂ ಕಲೆ, ನಾಟಕದ ಬಗ್ಗೆ ಒಲವಿದ್ದ ಕಾರಣ ಚಿತ್ರರಂಗದತ್ತ ಮುಖ ಮಾಡಿದೆ. ‘ಮುನಿಯ’, ‘ಬೊಂಬೆಯಾಟ’ ಸೇರಿದಂತೆ ಹಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿದ್ದೇನೆ. ಸಿನಿಮಾ ನಿರ್ದೇಶಿಸುವ ಕನಸಿತ್ತು. ಅದೀಗ ‘ನಿಶಾಚರ’ ಮೂಲಕ ನನಸಾಗಿದೆ’ ಎಂದು ಹೇಳಿಕೊಳ್ಳುತ್ತಾರೆ.

ನಿರ್ದೇಶನ ಕಷ್ಟವಾಗಲಿಲ್ಲವೇ? ಎಂದರೆ, ‘ಕಷ್ಟ ಆಯಿತು. ಆದರೆ, ಸಿನಿಮಾ ನಿರ್ದೇಶಿಸುವುದು ನನ್ನ ಗುರಿ. ಹೀಗಾಗಿ ಇಷ್ಟಪಟ್ಟು ಮಾಡಿದೆ. ನಮ್ಮ ತಂಡದಿಂದ ನನಗೆ ತುಂಬ ಸಹಾಯವಾಯಿತು. ಸಿನಿಮಾ ಕೇವಲ ದೃಶ್ಯ ಮಾತ್ರವಲ್ಲ ನಮ್ಮ ಭಾವನೆ, ಬಣ್ಣ, ಕಥೆ ಹೇಳುವ ವಿಧಾನ ಎಲ್ಲ ವಿಷಯಗಳೂ ಸಿನಿಮಾದಲ್ಲಿರುತ್ತವೆ. ಹೀಗಾಗಿಯೇ ಶೇಕಡಾ 80ರಷ್ಟು ಕೆಲಸ ಶಬ್ದವನ್ನು ಗ್ರಹಿಸಿ ಮಾಡಿದೆ’ ಎನ್ನುವ ಭಾಸ್ಕರ್, ‘ನಾನು ವಿಶುಯಲಿ ಚಾಲೆಂಜಡ್ ಎಂಬುದನ್ನು ಮರೆತುಬಿಟ್ಟಿದ್ದೇನೆ. ನನ್ನ ಜತೆ ಒಂದು ತಾಸು ಇದ್ದರೆ ನೀವೂ ಮರೆತುಬಿಡ್ತೀರಾ’ ಎಂದು ನಗುತ್ತಾರೆ. ಇನ್ನು ‘ನಿಶಾಚರ’ ವಿಷಯಕ್ಕೆ ಬಂದರೆ ಕಾರ್ಕಳ, ಉಡುಪಿಯಲ್ಲಿ 26 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಭಾಸ್ಕರ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಮಾಡಿದ್ದಾರೆ. ಅಕ್ಷಯ್ ಹಾಗೂ ಸ್ವಸ್ತಿಕಾ ಪೂಜಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಮಜಾ ಟಾಕೀಸ್’ ಮೋಹನ್ ಸಂಗೀತ ಚಿತ್ರಕ್ಕಿದೆ.