ಸಿನಿವಾಣಿ

ಪ್ರಿಯಾಂಕಾ, ಲ್ಯಾಂಗ್​ ಮಂಜುಗಾಗಿ ಕಲರ್ಸ್​ ಕನ್ನಡದ ವಿರುದ್ಧ ತಿರುಗಿಬಿದ್ದ ಬಿಗ್​ಬಾಸ್​ ವೀಕ್ಷಕರು!

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ತನ್ನ 8ನೇ ಆವೃತ್ತಿಯನ್ನು ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸಿ ವೀಕ್ಷಕರಿಗೆ ಶಾಕ್​ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಬಿಗ್​ಬಾಸ್​ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ಜೂನ್​ 21ರಿಂದ ಬಿಗ್​ಬಾಸ್ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆ.

ಕೇವಲ ಸ್ಪರ್ಧಿಗಳಲ್ಲದೇ ಕರೊನಾ ಸೋಂಕಿನಿಂದ ವಾರಾಂತ್ಯದ ಎಪಿಸೋಡ್​ನಿಂದ ದೂರ ಉಳಿದಿದ್ದ ನಿರೂಪಕ ಸುದೀಪ್ ಕೂಡ ಮತ್ತೆ ಬಿಗ್​ಬಾಸ್​ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಎರಡನೇ ಇನ್ನಿಂಗ್ಸ್​ಗೆ ಸಂಬಂಧಿಸಿದ ಪ್ರೋಮೋಗಳ ಝಲಕ್​ ಸದ್ದು ಮಾಡುತ್ತಿದೆ. ಆದರೆ, ಇದೇ ಪ್ರೋಮೋಗಳಿಂದ ಕಲರ್ಸ್​ ಕನ್ನಡದ ಮೇಲೆ ಬಿಗ್​ಬಾಸ್​ ವೀಕ್ಷಕರ ಅಸಮಾಧಾನವೂ ಇದೆ.

12 ಸ್ಪರ್ಧಿಗಳೊಂದಿಗೆ ಬಿಗ್​ಬಾಸ್​ ಮತ್ತೆ ಕಿರುತೆರೆಗೆ ಬರಲಿದೆ. ಎಲ್ಲರೂ ರೆಡಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅರವಿಂದ್​ ಕೆ.ಪಿ, ದಿವ್ಯಾ ಉರುಡುಗ, ವೈಷ್ಣವಿ, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ಚಂದ್ರಚೂಡ್​, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಘು ಮತ್ತು ಶಮಂತ್​ ಅವರನ್ನೊಳಗೊಂಡ ಪ್ರೋಮೋ ಹೊರಬಂದಿದೆ.

ಆದರೆ, ಮಂಜು ಪಾವಗಡ ಮತ್ತು ಪ್ರಿಯಾಂಕ ತಿಮ್ಮೇಶ್​ ಪ್ರೋಮೋ ಇನ್ನು ಯಾಕೆ ಬಿಡುಗಡೆ ಮಾಡಿಲ್ಲ. ಎಂದು ಕಲರ್ಸ್​ ಕನ್ನಡವನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಎರಡನೇ ಇನ್ನಿಂಗ್ಸ್​ ಆರಂಭವಾಗಿಲ್ಲ ಆಗಲೇ ಸ್ಪರ್ಧಿಗಳೆಡೆಗೆ ನಿಮ್ಮ ಫೇವರಿಟಿಸಂ ಪ್ರದರ್ಶಿಸಲು ಶುರು ಮಾಡಿದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಎಲ್ಲ ಸ್ಪರ್ಧಿಗಳನ್ನು ಸಮನಾಗಿ ಕಾಣುವಂತೆ ಒಂದು ವರ್ಗದ ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ.

ಬಲಿಷ್ಠ ಆಟಗಾರರನ್ನು ಬೆಂಬಲಿಸುವಂತೆ ನೆಟ್ಟಿಗರು ಚಾನೆಲ್‌ಗೆ ಕರೆ ನೀಡಿದ್ದಾರೆ. ಬಿಬಿಕೆ 8ರ ಮೊದಲ ಇನ್ನಿಂಗ್ಸ್‌ನಲ್ಲಿ, ಕಲರ್ಸ್ ಕನ್ನಡ ಅರವಿಂದ್ ಕೆಪಿ, ದಿವ್ಯಾ ಯು, ವೈಷ್ಣವಿ, ಮತ್ತು ಪ್ರಶಾಂತ್ ಎಸ್ ಅವರ ಮೇಲೆ ಹೆಚ್ಚು ಗಮನಹರಿಸಿತು. ವಿಶೇಷವಾಗಿ ರಾಜೀವ್ ಅವರಂತಹ ಪ್ರಬಲ ಸ್ಪರ್ಧಿಯನ್ನು ಹೊರಹಾಕಿದ್ದಕ್ಕಾಗಿ ಚಾನೆಲ್ ಟೀಕೆಗೆ ಗುರಿಯಾಯಿತು. (ಏಜೆನ್ಸೀಸ್​)