ಸಿನಿವಾಣಿ

ಬಿಗ್​ಬಾಸ್​ ಮನೆಗೆ ರಾಧಾ ಹಿರೇಗೌಡರ್ ಖಡಕ್​ ಎಂಟ್ರಿ! ಚೈತ್ರಾ ಕುಂದಾಪುರ ಶಾಕ್​, ಐಶ್ವರ್ಯಾ ಕಣ್ಣೀರು | Bigg Boss Kannada

Bigg Boss Kannada: ಬಿಗ್​ಬಾಸ್ ಸೀಸನ್​ 11 ಶುರುವಾಗಿ ಒಂದು ತಿಂಗಳು ಸಮೀಪಿಸುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಗಲಾಟೆಯ ಕಾವು ಇಡೀ ಮನೆಯನ್ನು ಆವರಿಸಿದೆ. ವಾದ-ಪ್ರತಿವಾದಗಳು ಜೋರಾಗಿ ನಡೆಯುತ್ತಿದೆ.

ಹೆಣ್ಣು ನಿಂದನೆ ಆರೋಪದಲ್ಲಿ ಜಗದೀಶ್​ ದೊಡ್ಮನೆಯಿಂದ ಹೊರಬಿದ್ದರೆ, ಜಗದೀಶ್​ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ರಂಜಿತ್​ ಅವರನ್ನು​ ಮನೆಯಿಂದ ಹೊರಗಾಕಲಾಯಿತು. ಒಟ್ಟಿಗೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗಿದ್ದು, ಶೋಗೆ ಕೊಂಚ ಹಿನ್ನೆಡೆಯಾಯಿತು. ಇದರ ಬೆನ್ನಲ್ಲೇ ವೈಲ್ಡ್​ ಕಾರ್ಡ್​ ಮೂಲಕ ಸರಿಗಮಪ ಖ್ಯಾತಿಯ ಹನುಮಂತ ಎಂಟ್ರಿ ಕೊಂಚ ಬೂಸ್ಟ್​ ನೀಡಿತು. ಇದೀಗ ಇಡೀ ಮನೆಗೆ ಕಿಚ್ಚು ಹಚ್ಚೋಕೆ ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

ಹೌದು, ದೊಡ್ಮನೆಗೆ ಕನ್ನಡದ ಖ್ಯಾತ ನಿರೂಪಕಿ ರಾಧಾ ಹಿರೇಗೌಡರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋವನ್ನು ಕಲರ್ಸ್​ ಕನ್ನಡ ಬಿಡುಗಡೆ ಮಾಡಿದೆ. ಆದರೆ, ರಾಧಾ ಅವರು ಸ್ಪರ್ಧಿಯಾಗಿ ಬಂದಿದ್ದಾರಾ? ಅಥವಾ ಅತಿಥಿಯಾಗಿ ಬಂದಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಇದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಸ್ಪರ್ಧಿಯಾಗಿ ಬಂದಿದ್ದರೆ ಬಿಗ್​ಬಾಸ್​ ಶೋಗೆ ಮತ್ತೆ ಬೂಸ್ಟ್​ ಸಿಗುವ ಸಾಧ್ಯತೆ ಇದೆ.

ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಎಂದಿನಂತೆ ತಮ್ಮ ಖಡಕ್​ ಮಾತುಗಳಿಂದಲೇ ಬಿಗ್​ಬಾಸ್​ ಮನೆ ಮಂದಿಗೆ ರಾಧಾ ಚಳಿ ಬಿಡಿಸಿದ್ದಾರೆ. ನೀವು ಬಂದಿದ್ದೀರಿ ಅಂದ್ರೆ ನಮಗೆ ನೀರು ಕುಡಿಸ್ತೀರಿ ಎಂದು ಸ್ಪರ್ಧಿಗಳು ಹೇಳಿದ್ದಾರೆ. ಬರ್ತಿದಂಗೆ ಬಿಗ್​ಬಾಸ್​ ಮನೆಯ ರಾಜಕೀಯ ಬಗ್ಗೆ ರಾಧಾ ಅವರು ತಮ್ಮ ಮೊನೆಚಾದ ಮಾತುಗಳನ್ನಾಡಿದ್ದಾರೆ. ನಮಗೆಲ್ಲ ಪಕ್ಷಗಳೆಲ್ಲ ಹೊಸದಲ್ಲ, ಭಾಷಣ ಹಾಗೂ ಜೈಕಾರ ಇದೆಲ್ಲ ಸಾಕಷ್ಟು ನೋಡಿದ್ದೀವಿ ಎಂದರು. ರಾಧಾ ಅವರು ಕೇಳಿದ ನೇರವಾದ ಪ್ರಶ್ನೆಗಳಿಗೆ ಸ್ಪರ್ಧಿಗಳು ಕಕ್ಕಾಬಿಕ್ಕಿಯಾದರು. ಅದರಲ್ಲೂ ರಾಧಾ ಅವರ ಮಾತಿಗೆ ಐಶ್ವರ್ಯಾ ಕಣ್ಣೀರಾಕಿದರು. ತಮ್ಮ ಹರಿತವಾದ ಮಾತುಗಳಿಂದಲೇ ಸ್ಪರ್ಧಿಗಳ ಎದೆಯಲ್ಲಿ ರಾಧಾ ಅವರು ನಡುಕು ಹುಟ್ಟಿದ್ದಾರೆ.

ರಾಧಾ ಅವರ ಬಿಗ್​ಬಾಸ್​ ಮನೆ ಪ್ರಯಾಣ ಒಂದೇ ದಿನಕ್ಕೆ ಸೀಮಿತಾನಾ ಅಥವಾ ಸ್ಪರ್ಧಿಯಾಗಿ ಅಲ್ಲಿಯೇ ಉಳಿಯುತ್ತಾರಾ ಎಂಬುದು ಇಂದು ಗೊತ್ತಾಗಲಿದೆ. ಇನ್ನು ಇತ್ತೀಚೆಗಷ್ಟೇ ತಾಯಿ ಸರೋಜಾ ಅವರು ನಿಧನರಾದ್ದರಿಂದ ಈ ವಾರದ ಕೊನೆಯ ಎಪಿಸೋಡ್​ಗೆ ನಿರೂಪಕ ಸುದೀಪ್​ ಬರುತ್ತಾರಾ? ಇಲ್ಲವಾ? ಅನ್ನೂ ಪ್ರಶ್ನೆ ಸಹ ಮೂಡಿದೆ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಈ ವಾರದ ಕೊನೆಯವರೆಗೂ ಕಾಯಬೇಕಿದೆ.