ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 10 ಅಂತಿಮ ಘಟ್ಟ ತಲುಪಿದೆ. 112 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಬಂಧಿಯಾಗಿದ್ದ ಸ್ಪರ್ಧಿಗಳಿಗೆ ಇಂದು ಸ್ವಾತಂತ್ರ ಸಿಗಲಿದೆ. ಅಳು, ನಗು, ಟಾಸ್ಕ್ಗಳು, ಜಗಳ, ಗಲಾಟೆ, ಮುಗಿಯದ ಡ್ರಾಮಾ ಜತೆಗೆ ನೆನಪಿನಲ್ಲುಳಿಯುವ ಅನುಭವಗಳೊಂದಿಗೆ ಸ್ಪರ್ಧಿಗಳು ಇಂದು ಬಿಗ್ಬಾಸ್ ಮನೆಯಿಂದ ಹೊರಬರಲಿದ್ದಾರೆ. 10ನೇ ಸೀಸನ್ ಆದ ಕಾರಣ ಈ ಬಾರಿ ‘ಹ್ಯಾಪಿ ಬಿಗ್ಬಾಸ್’ ಎಂಬ ಶೀರ್ಷಿಕೆಯಲ್ಲಿ ರಿಯಾಲಿಟಿ ಶೋ ಆಯೋಜಿಸಲಾಗಿದೆ. ಈ ಹಿಂದಿನ ಎಲ್ಲ ಸೀಸನ್ಗಳಲ್ಲೂ ಐವರು ಸ್ಪರ್ಧಿಗಳು ಫಿನಾಲೆ ತಲುಪಿದ್ದರು. ಆದರೆ, ಇದೇ ಮೊದಲ ಬಾರಿಗೆ ಆರು ಸ್ಪರ್ಧಿಗಳು ಫಿನಾಲೆ ತಲುಪಿದ್ದು ಸೀಸನ್ 10ರ ವಿಶೇಷ.
ಈ ಬಾರಿಯ ಸ್ಪರ್ಧಿಗಳು
ಕಳೆದ ಅ. 8ರಂದು ಪ್ರಾರಂಭವಾದ ಬಿಗ್ಬಾಸ್ ಸೀಸನ್ 10ರಲ್ಲಿ ಮೊದಲ ದಿನವೇ ಆಯ್ಕೆಯಾಗದೇ ಉಳಿದ ಚಿತ್ರಾಲ್ ರಂಗಸ್ವಾಮಿ ಮತ್ತು ಸುರಸುಂದರ ಅವಿನಾಶ್ ಹಾಗೂ 50ನೇ ದಿನ ಎಂಟ್ರಿಯಾದ ಪವಿ ಪೂವಪ್ಪ ಮತ್ತು ಅವಿನಾಶ್ ಸೇರಿ ಒಟ್ಟು 21 ಸ್ಪರ್ಧಿಗಳು ಭಾಗಿಯಾಗಿದ್ದರು. ಸಂಗೀತಾ ಶೃಂಗೇರಿ, ವಿನಯ್ ಗೌಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್, ವರ್ತರ್ ಸಂತೋಷ್, ಪ್ರತಾಪ್, ನಮ್ರತಾ, ತನಿಷಾ ಕುಪ್ಪಂಡ, ಮೈಕಲ್ ಅಜಯ್, ಸಿರಿ, ಸ್ನೇಹಿತ್ ಗೌಡ, ಅವಿನಾಶ್ ಶೆಟ್ಟಿ, ನೀತು ವನಜಾಕ್ಷಿ, ಭಾಗ್ಯಶ್ರೀ ರಾವ್, ಈಶಾನಿ ಚಂದ್ರಶೇಖರ್, ರಕ್ಷಕ್ ಬುಲೆಟ್, ಗೌರೀಶ್ ಅಕ್ಕಿ ಮತ್ತು ಸ್ನೇಕ್ ಶ್ಯಾಮ್ ಈ ಬಾರಿ ಬಿಗ್ಬಾಸ್ ಮನೆ ಸೇರಿದ್ದರು.
ಹೊರಗೆ ಬಂದ ತುಕಾಲಿ ಸಂತೋಷ್
ಬಿಗ್ಬಾಸ್ ಸೀಸನ್ 10ರಲ್ಲಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್, ವರ್ತರ್ ಸಂತೋಷ್ ಮತ್ತು ಪ್ರತಾಪ್ ಹೀಗೆ ಆರು ಸ್ಪರ್ಧಿಗಳು ಫಿನಾಲೆ ತಲುಪಿದ್ದರು. ಅವರಲ್ಲಿ ಶನಿವಾರ ತುಕಾಲಿ ಸಂತೋಷ್ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಗೆಲ್ಲುವ ಫೇವರಿಟ್ ಯಾರು?
ಫಿನಾಲೆ ತಲುಪಿರುವ ಪ್ರತಿಯೊಬ್ಬ ಸ್ಪರ್ಧಿಯೂ ಒಂದಲ್ಲಾ ಒಂದು ರೀತಿ ಜನರನ್ನು ರಂಜಿಸಿದ್ದಾರೆ. ಸಂಗೀತಾ ಶೃಂಗೇರಿ, ಟಾಸ್ಕ್ಗಳಲ್ಲಿ ಯಾವ ಹುಡುಗರಿಗೂ ಕಡಿಮೆ ಇಲ್ಲ ಎಂಬಂತೆ ಗಟ್ಟಿಯಾಗಿ ನಿಂತಿರುವ ಏಕೈಕ ಮಹಿಳೆ. ವಿನಯ್ ನೇರ ಮಾತು, ಆಕ್ರಮಣಕಾರಿ ಶೈಲಿಯಿಂದ ಗಮನ ಸೆಳೆದರು. ಕಾರ್ತಿಕ್ ಮಹೇಶ್ ಎರಡು ಬಾರಿ ಕ್ಯಾಪ್ಟನ್ ಆಗಿ ಅಬ್ಬರಿಸಿದರೆ, ವರ್ತರ್ ಸಂತೋಷ್ ಮನೆಯ ಹೊರಗೆ ಹುಲಿ ಉಗುರು ಪ್ರಕರಣದಿಂದ ಸುದ್ದಿಯಾಗಿ, ಮನೆಯ ಒಳಗೆ ಸ್ಟ್ರಾಂಗ್ ಸ್ಪರ್ಧಿಯಾಗಿ ಸದ್ದು ಮಾಡಿದರು. ಉಳಿದಂತೆ ಪ್ರತಾಪ್ ಸೌಮ್ಯ ಸ್ವಭಾವ, ಮೃದು ಮಾತುಗಳಿಂದ ತಮ್ಮದೇ ಗೇಮ್ ಪ್ಲಾ್ಯನ್ ಮೂಲಕ ಜನರನ್ನು ಸೆಳೆದಿದ್ದಾರೆ.