ಸಿನಿವಾಣಿ

24 ಗಂಟೆ ಕ್ಯಾಮೆರಾ ಮುಂದಿರೋಕೆ ಇಷ್ಟ ಇಲ್ಲ ... 'ಬಿಗ್​ ಬಾಸ್​'ಗೆ ನೋ ಎಂದ ಭೂಮಿಕಾ

ಮುಂಬೈ: ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ 'ಬಿಗ್​ ಬಾಸ್​' ಹಿಂದಿಯ 15ನೇ ಸೀಸನ್​ ಶುರುವಾಗುತ್ತದೆ ಎಂಬ ಸುದ್ದಿಯಾಗಿದ್ದು, ಈ ಸೀಸನ್​ನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಚರ್ಚೆ ಶುರುವಾಗಿದೆ.

ಈಗಾಗಲೇ ಈ ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಬಹುದು ಎಂಬ ಊಹಾಪೋಹಗಳು ಶುರುವಾಗಿದ್ದು, ಈ ಪೈಕಿ ನಟಿ ಭೂಮಿಕಾ ಚಾವ್ಲಾ ಅವರ ಹೆಸರು ಸಹ ಕೇಳಿ ಬಂದಿದೆ. ಮಹೇಶ್​ ಬಾಬು ಅಭಿನಯದ ತೆಲುಗು ಚಿತ್ರ 'ಒಕ್ಕಡು' ಮೂಲಕ ಜನಪ್ರಿಯರಾದ ಭೂಮಿಕಾ, ಆ ನಂತರ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.

ಭೂಮಿಕಾ, ಕನ್ನಡದಲ್ಲೂ ಉಪೇಂದ್ರ ಅಭಿನಯದ 'ಗಾಡ್​ಫಾದರ್​' ಮತ್ತು ರವಿಚಂದ್ರನ್​ ಅಭಿನಯದ 'ಲವ್​ ಯೂ ಆಲಿಯಾ' ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರು, ಸಲ್ಮಾನ್​ ಖಾನ್​ ನಡೆಸಿಕೊಡುವ 'ಬಿಗ್​ ಬಾಸ್​'ನ 15ನೇ ಸೀಸನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಈ ಸುದ್ದಿಯನ್ನು ಭೂಮಿಕಾ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಇದೊಂದು ಸುಳ್ಳು ಸುದ್ದಿ. ನಾನು 'ಬಿಗ್​ ಬಾಸ್​'ನಲ್ಲಿ ಭಾಗವಹಿಸುತ್ತಿಲ್ಲ ಮತ್ತು ನನಗೆ ಆಫರ್​ ಸಹ ಬಂದಿಲ್ಲ. ಆರಂಭದ ಮೂರು ಸೀಸನ್​ಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಆಫರ್​ ಬಂದಿತ್ತು. ಆದರೆ, ನಾನು ಒಪ್ಪಿರಲಿಲ್ಲ. ಈಗ ಅವಕಾಶ ಬಂದರೂ ನಾನು ಒಪ್ಪುವುದಿಲ್ಲ. ಏಕೆಂದರೆ, 24 ಗಂಟೆಗಳ ಕಾಲ ಕ್ಯಾಮೆರಾ ಮುಂದೆ ಇರುವುದಕ್ಕೆ ನನಗೆ ಇಷ್ಟವಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.