ಸಿನಿವಾಣಿ

'ಟಾಯ್ಲೆಟ್​' ನಂತರ ಅಕ್ಷಯ್​ ಅಭಿನಯದ ಇನ್ನೊಂದು ಚಿತ್ರಕ್ಕೆ ನಾಯಕಿಯಾದ ಭೂಮಿ

ಮುಂಬೈ: 'ಬದಾಯಿ ದೋ' ಎಂಬ ಚಿತ್ರ ಬಿಟ್ಟರೆ ಭೂಮಿ ಪೆಡ್ನೇಕರ್​ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಮುಂದ? ಎಂದು ಕೇಳಿದವರಿಗೆಲ್ಲ, ಸದ್ಯದಲ್ಲೇ ಹೇಳ್ತೀನಿ ಎನ್ನುತ್ತಿದ್ದ ಭೂಮಿ ಈಗ ಕೊನೆಗೂ ಮುಂದೇನು ಎಂದು ಹೇಳಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯದ ಹೊಸ ಚಿತ್ರದಲ್ಲಿ ಅವರು ಭೂಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.

'ರಕ್ಷಾ ಬಂಧನ್​' ಎಂಬ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಬಂದಿತ್ತು. ಆನಂದ್​ ಎಲ್​ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೆ ಸರಿಯಾಗಿ, ಚಿತ್ರಕ್ಕೆ ನಾಯಕಿಯಾಗಿ ಭೂಮಿ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ, 'ಟಾಯ್ಲೆಟ್​ - ಏಕ್​ ಪ್ರೇಮ್​ಕಥಾ' ಚಿತ್ರದಲ್ಲಿ ಭೂಮಿ, ಅಕ್ಷಯ್​ ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಈಗ ಈ ಚಿತ್ರದಲ್ಲೂ ಅವರು ಅಕ್ಷಯ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಸ್ವತಃ ಅಕ್ಷಯ್​ ಕುಮಾರ್​ ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ನಿರ್ದೇಶಕ ಆನಂದ್​ ಮತ್ತು ಭೂಮಿ ಜತೆಗೆಇರುವ ಒಂದು ಫೋಟೋವನ್ನು ಹಂಚಿಕೊಂಡಿರುವ ಅವರು, 'ನಾವು ಸಂತೋಷವಾಗಿದ್ದರೆ ಅದು ನಮ್ಮ ಮುಖದಲ್ಲಿ ವ್ಯಕ್ತವಾಗುತ್ತದೆ. ಭೂಮಿ ನಮ್ಮ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದು, ನಮಗೆ ನಿಜಕ್ಕೂ ಸಂತೋಷ ತಂದಿದೆ' ಎಂದು ಹೇಳಿಕೊಂಡಿದ್ದಾರೆ. ಭೂಮಿ ಸಹ ಚಿತ್ರತಂಡಕ್ಕೆ ಸೇರಿದ್ದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

'ರಕ್ಷಾ ಬಂಧನ್​' ಎಂಬ ಹೆಸರೇ ಹೇಳುವಂತೆ ಚಿತ್ರವು ಅಣ್ಣ-ತಂಗಿಯ ಸುತ್ತ ಸುತ್ತಲಿದೆ. ಸದ್ಯ ಅಕ್ಷಯ್​ ಕುಮಾರ್​ಗೆ ನಾಯಕಿ ಯಾರು ಎಂದು ಗೊತ್ತಾಗಿದೆ. ಇನ್ನು, ಅಕ್ಷಯ್​ ಕುಮಾರ್​ ಅವರ ತಂಗಿ ಪಾತ್ರದಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ ಎಂಬ ವಿಷಯ ಇನ್ನಷ್ಟೇ ಗೊತ್ತಾಗಬೇಕಿದೆ.