ಸಿನಿವಾಣಿ

ಬೆಂಕಿ ಟ್ರೇಲರ್ ಬಂತು: ಅಣ್ಣ-ತಂಗಿ ಸೆಂಟಿಮೆಂಟ್ ಸಿನಿಮಾ

Webdesk - Ravikanth

ಬೆಂಗಳೂರು: ಮೊದಲಿಗೆ ಚಿತ್ರದ ಹಾಡು ಬಿಡುಗಡೆ ಮಾಡಿದ್ದರು ಅನೀಶ್. ಇದೀಗ ಚಿತ್ರ ಬಿಡುಗಡೆ ಆಗುವುದಕ್ಕೆ ಇನ್ನೊಂದು ತಿಂಗಳಿದೆ ಎನ್ನುವಾಗ ಅವರು ‘ಬೆಂಕಿ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಚಿತ್ರದ ಪ್ರಚಾರ ಶುರು ಮಾಡಿಕೊಂಡಿರುವ ಅವರು ಜುಲೈ 15ರಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ.

‘ಬೆಂಕಿ’, ಅನೀಶ್ ಅಭಿನಯದ 10ನೇ ಚಿತ್ರವಾದರೆ, ನಿರ್ಮಾಪಕರಾಗಿ ಮೂರನೆಯ ಚಿತ್ರ. ಸ್ನೇಹಿತರ ಸಹಕಾರವಿಲ್ಲದಿದ್ದರೆ ಈ ಚಿತ್ರ ಸಾಧ್ಯವಾಗುತ್ತಿರಲಿಲ್ಲ ಎನ್ನುವ ಅವರು, ‘ನನಗೆ ಆಫರ್ ಕಡಿಮೆಯಾಗಿಲ್ಲ. ಆದರೆ, ನನಗೆ ಇಷ್ಟವಾದ ಕಂಟೆಂಟ್ ಸಿಗುತ್ತಿರಲಿಲ್ಲ. ಹಾಗಾಗಿ, ಇಷ್ಟದ ಕಥೆಯ ಜತೆಗೆ ನಾನೇ ನಿರ್ಮಾಣಕ್ಕಿಳಿದೆ. ಅದಕ್ಕೆ ಸ್ನೇಹಿತರ ಸಹಕಾರ ಅಪಾರ. ನಟನೆಗಿಂತ ಪ್ರೊಡಕ್ಷನ್ ನೋಡಿಕೊಳ್ಳುವುದು ನನಗೆ ಸವಾಲು ಆಗಿತ್ತು. ಇದೊಂದು ಟಚ್ಚಿಂಗ್ ಸಿನಿಮಾ. ಅಣ್ಣ-ತಂಗಿ ಸೆಂಟಿಮೆಂಟ್ ಇರುವ ಸಿನಿಮಾ’ ಎಂದು ಚಿತ್ರದ ಬಗ್ಗೆ ಅವರು ಮಾಹಿತಿ ಕೊಡುತ್ತಾರೆ.

ಈ ಚಿತ್ರವನ್ನು ದಿವಂಗತ ಎ.ಆರ್. ಬಾಬು ಅವರ ಮಗ ಶಾನ್ ನಿರ್ದೇಶನ ಮಾಡಿದ್ದಾರೆ. ಇದೊಂದು ಕಂಪ್ಲೀಟ್ ಪ್ಯಾಕೇಜ್ ಸಿನಿಮಾ ಎನ್ನುವ ಅವರು, ‘ಇದರಲ್ಲಿ ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ವಿಂಕ್​ವಿಷಲ್ ಸ್ಟುಡಿಯೋಸ್​ನಿಂದ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಹೊಸ ಹುಡುಗರಿಗೆ ಅವಕಾಶ ಸಿಗುತ್ತಿವೆ’ ಎನ್ನುತ್ತಾರೆ. ಈ ಹಿಂದೆ ನಿಖಿಲ್ ಕುಮಾರ್ ಅಭಿನಯದ ‘ರೈಡರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಂಪದ ಹುಲಿವಾನ, ಈ ಚಿತ್ರದಲ್ಲಿ ಅನೀಶ್ ನಾಯಕಿಯಾಗಿ ನಟಿಸಿದ್ದಾರೆ. ಶ್ರುತಿ ಪಾಟೀಲ್ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ.