ಗಗನ್​-ತಾಂಡವ್​ ಜೋಡಿ ನೋಡಿ ತಮಿಳಿನ ಸೂಪರ್​ಹಿಟ್​​ ಚಿತ್ರದ ಪಾತ್ರಗಳಿಗೆ ಹೋಲಿಸಿದ ಬಿಗ್​ಬಾಸ್​​ ವೀಕ್ಷಕರು! 
ಸಿನಿವಾಣಿ

ಗಗನ್​-ತಾಂಡವ್​ ಜೋಡಿ ನೋಡಿ ತಮಿಳಿನ ಸೂಪರ್​ಹಿಟ್​​ ಚಿತ್ರದ ಪಾತ್ರಗಳಿಗೆ ಹೋಲಿಸಿದ ಬಿಗ್​ಬಾಸ್​​ ವೀಕ್ಷಕರು! BBK13

ತಾಂಡವ್​, ಲಿಖಿತ್​ ಮತ್ತು ಜಗ್ಗ ಅವರ ಪೈಕಿ ತಾಂಡವ್​ ಎಲಿಮಿನೇಟೆಡ್​ ಎಂದು ಕೆಂಪು ಬಣ್ಣದ ಕಾರ್ಡ್​ನಲ್ಲಿ ಬರೆದಿದ್ದು ನೋಡಿ ಇಡೀ ಮನೆ ಮಂದಿ ಕೆಲ ನಿಮಿಷ ಗಪ್​ಚುಪ್​ ಆದರು. ಇದೇ ವೇಳೆ, ತಾಂಡವ್ ಜತೆ ಮೊದಲಿನಿಂದಲೂ ಬಹಳ ಆತ್ಮೀಯತೆ, ಒಳ್ಳೆಯ ಸ್ನೇಹದ ಒಡನಾಟ ಹೊಂದಿದ್ದ ಗಗನ್​, ಪ್ರಕ್ರಿಯೆಗೂ ಮುನ್ನವೇ ಬಿಕ್ಕಿ ಬಿಕ್ಕಿ ಅತ್ತರು.

BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 13ರ ಘಟಾನುಘಟಿ ಸ್ಪರ್ಧಿಗಳ ಪೈಕಿ ಈ ವಾರ ತಾಂಡವ್​ ರಾಮ್​ ಮಿಡ್​ವೀಕ್​ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಬಂದಿರುವುದು ಸದ್ಯ ಬಿಗ್ ಬಾಸ್​ ವೀಕ್ಷಕರಿಗೆ ಬಿಗ್​ ಶಾಕ್​ ಕೊಟ್ಟಂತಾಗಿದೆ. ಮನೆಯೊಳಗೆ ಪ್ರವೇಶಿಸಿದ ಮೊದಲ ದಿನದಿಂದಲೂ ಆದಷ್ಟು ತಾಳ್ಮೆಯಿಂದಲೇ, ಎಲ್ಲರನ್ನು ಪ್ರೀತಿಯಿಂದಲೇ ಗೆಲ್ಲುವ ಗುಣ ಹೊಂದಿದ್ದ ಸ್ಪರ್ಧಿಯೇ ಎಲಿಮಿನೇಟ್​ ಆಗಿದ್ದಾರೆ ಎಂಬುದನ್ನು ಕೆಲವರಿಂದ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಈ ವಾರ ಮೊದಲೇ ಹೇಳಿದಂತೆ ಮಿಡ್​ ವೀಕ್​ ಎಲಿಮಿನೇಷನ್​ ವಾರದ ಮಧ್ಯೆ ಇರಲಿದೆ ಎಂಬುದು ಮನೆಯ ಸದಸ್ಯರಿಗೆ ಮುಂಚೆಯೇ ಗೊತ್ತಿತ್ತು. ಆದರೆ, ಟಾಸ್ಕ್​ಗಳಲ್ಲಿ ಗೆದ್ದ ಧನುಷ್​, ಆಸಿಯಾ, ಕಾವ್ಯ ಮತ್ತು ಕಿರಣ್​ ಶಾಸ್ತ್ರಿಗೆ ತಮ್ಮನ್ನು ಬಿಟ್ಟು ಉಳಿದವರನ್ನು ನೇರವಾಗಿ ನಾಮಿನೇಟ್​ ಮಾಡಬೇಕು ಎಂದು ಬಿಗ್ ಬಾಸ್​ ತಿಳಿಸಿದ್ದರು. ಅಂತೆಯೇ, ಸೌಂದರ್ಯ, ತಾಂಡವ್​, ಲಿಖಿತ್​ ಮತ್ತು ಜಗ್ಗ ಅವರ ಪೈಕಿ ತಾಂಡವ್​ ಎಲಿಮಿನೇಟೆಡ್​ ಎಂದು ಕೆಂಪು ಬಣ್ಣದ ಕಾರ್ಡ್​ನಲ್ಲಿ ಬರೆದಿದ್ದು ನೋಡಿ ಇಡೀ ಮನೆ ಮಂದಿ ಕೆಲ ನಿಮಿಷ ಗಪ್​ಚುಪ್​ ಆದರು. ಇದೇ ವೇಳೆ, ತಾಂಡವ್ ಜತೆ ಮೊದಲಿನಿಂದಲೂ ಬಹಳ ಆತ್ಮೀಯತೆ, ಒಳ್ಳೆಯ ಸ್ನೇಹದ ಒಡನಾಟ ಹೊಂದಿದ್ದ ಗಗನ್​, ಪ್ರಕ್ರಿಯೆಗೂ ಮುನ್ನವೇ ಬಿಕ್ಕಿ ಬಿಕ್ಕಿ ಅತ್ತರು.

ಗೆಳೆಯ ತಾಂಡವ್​ ಹೆಸರು ಎಲಿಮಿನೇಟ್​ ಪಟ್ಟಿಯಲ್ಲಿ ಬರದಿರಲಿ, ಆತ ಸೇಫ್​ ಆಗಿ ಮನೆಯೊಳಗೆ ವಾಪಾಸ್​ ಬರಲಿ ಎಂದೇ ಗಗನ್​ ಕಣ್ಣೀರಾಕುತ್ತಿದ್ದರು. ಆದರೆ, ಬ್ಯಾಡ್​ ಲಕ್​ ಎನ್ನುವಂತೆ ತಾಂಡವ್​ ಅವರ ಹೆಸರೇ ಎಲಿಮಿನೇಟ್​ ಆದವರು ಎಂದು ಬಂದಿದ್ದು ಗಗನ್​ ದುಃಖಕ್ಕೆ ಕಾರಣವಾಯಿತು. ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಬಿಗ್​ ಬಾಸ್​. ದಯವಿಟ್ಟು, ತಾಂಡವ್​ನನ್ನು ಉಳಿಸಿಕೊಳ್ಳಿ ಎಂದು ಬೇಡಿಕೊಂಡಿದ್ದು ನೋಡುಗರ ಮನಕಲಕುವಂತಿತ್ತು. ಹಲವರು ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು ಗಗನ್​-ತಾಂಡವ್​ ಸ್ನೇಹವನ್ನು ಮೆಚ್ಚಿ ತಮಿಳಿನ ಸೂಪರ್​ಹಿಟ್​ ಸಿನಿಮಾದ ಪಾತ್ರಗಳಿಗೆ ಹೋಲಿಕೆ ಮಾಡಿದ್ದಾರೆ.

ಗಗನ್​-ತಾಂಡವ್​ ಇಬ್ಬರು ಒಟ್ಟಿಗೆ ಇರುವ ಒಂದು ಫೋಟೋ ನೋಡಿದ ಬಿಗ್ ಬಾಸ್​ ವೀಕ್ಷಕರು ಅದನ್ನು ತಮಿಳಿನ ಬ್ಲಾಕ್​ಬಸ್ಟರ್​ ಹಿಟ್​ ಹಾಗೂ ನೋಡುಗರ ಮನಗೆದ್ದ 'ಮೀಯಳಗನ್' ಚಿತ್ರದ ನಟರಾದ ಕಾರ್ತಿಕ್​ ಮತ್ತು ಅರವಿಂದ್​ ಸ್ವಾಮಿ ಜೋಡಿಯೊಂದಿಗೆ ಹೋಲಿಕೆ ಮಾಡಿದ್ದಾರೆ. ಕಾರಣ, ಈ ಸಿನಿಮಾದಲ್ಲಿ ಇವರಿಬ್ಬರ ಜೋಡಿ ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿತ್ತು. ಇಬ್ಬರ ಸ್ನೇಹ ಮತ್ತು ಬಾಂಧವ್ಯ ನೋಡಿದಾಗ ಇದ್ದರೆ ಬದುಕಿನಲ್ಲಿ ಹೀಗಿರಬೇಕಪ್ಪ ಎಂದು ಅನೇಕರು ಭಾವಿಸಿದ್ದು ಉಂಟು. ಈಗ ಅದೇ ರೀತಿಯ ದೃಶ್ಯವನ್ನು ಬಿಗ್ ಬಾಸ್​ ಸೀಸನ್​ 13ರಲ್ಲಿ ತಾಂಡವ್​ ಮತ್ತು ಗಗನ್​ ಜೋಡಿ ನೋಡಿದವರಿಗೆ ಅನಿಸಿದ್ದು, ತಮ್ಮ ಅಭಿಪ್ರಾಯವನ್ನು ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.