ಸಿನಿವಾಣಿ

ಬಾಲಯ್ಯ ಮತ್ತು ಶಿವಣ್ಣನಿಗೆ ಹೋಲಿಕೆ? ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ... ಯಾರ ಲುಕ್ ಬೆಸ್ಟ್?

ತೆಲುಗಿನ ಸೂಪರ್‌ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂಬರುವ ಟೈಟಲ್ ಇಲ್ಲದ ಚಿತ್ರ 'ಎನ್‌ಬಿಕೆ 107' ತುಂಬಾ ವಿಶೇಷವಾಗಿದೆ. ಈ ಚಿತ್ರ ಕನ್ನಡದವರಿಗೂ ತುಂಬಾ ಹತ್ತಿರವಾಗಲಿದೆ. ಕಾರಣ, ಈ ಸಿನಿಮಾದ ಮುಲಕ ಕನ್ನಡದ ಜನ ಮೆಚ್ಚಿನ ನಟ ದುನಿಯಾ ವಿಜಯ್ ಅವರು ಟಾಲಿವುಡ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ಆದರೆ, ಸದ್ಯ ಒಂದು ಕಾರಣಕ್ಕೆ ಈ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಯಾವ ಕಾರಣಕ್ಕೆ ಅಂತೀರಾ?
ಅಂದಹಾಗೆ, 'ಎನ್‌ಬಿಕೆ 107' ಚಿತ್ರತಂಡ ಫೆಬ್ರವರಿ 22 ರಂದು ಮುಂಜಾನೆ ಬಾಲಯ್ಯ ಅವರ ಈ ಸಿನಿಮಾದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದು, ಅದಕ್ಕೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಚಿತ್ರದಲ್ಲಿನ ಬಾಲಕೃಷ್ಣ ಅವರ ಮೊದಲ ಲುಕ್, 2017 ರಲ್ಲಿ ರಿಲೀಸ್ ಆದ ಕನ್ನಡ ಚಿತ್ರ 'ಮಫ್ತಿ' ಯಲ್ಲಿನ ನಟ ಶಿವ ರಾಜ್‌ಕುಮಾರ್ ಅವರ ಒಂದು ಲುಕ್ ಅನ್ನು ಹೋಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಗಳು ಆರಂಭವಾದ ಕೂಡಲೆ, 'NBK 107' ಸಿನಿಮಾ ಬಹುಶಃ 'ಮಫ್ತಿ'ಯ ರೀಮೇಕ್ ಆಗಿರಬಹುದು ಎಂದು ಸಹ ಅನೇಕರು ಭಾವಿಸ ತೊಡಗಿದ್ದಾರೆ. ಕಪ್ಪು ಅಂಗಿ ಮತ್ತು ಪಂಚೆ ತೊಟ್ಟಿರುವ ನಟ ಶಿವ ರಾಜ್‌ಕುಮಾರ್ ಅವರ ಲುಕ್ 'ಎನ್‌ಬಿಕೆ 107' ನಲ್ಲಿನ ಬಾಲಕೃಷ್ಣ ಅವರ ಮೊದಲ ಲುಕ್​ಗೆ ಸಾಕಷ್ಟು ಹೋಲಿಕೆ ಇದೆ. ಹೀಗಾಗಿ, ನಟ ಶಿವಣ್ಣ ಹಾಗೂ ನಟ ಬಾಲಕೃಷ್ಣ ಅವರ ಲುಕ್​ಗಳು ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿವೆ ಎಂದೇ ಹೇಳಬೇಕು.