ಬೆಂಗಳೂರು: ಕಳೆದ ವರ್ಷ ಲಾಕ್ಡೌನ್ ಮುಗಿದ ಮೇಲೆ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರದ ಚಿತ್ರೀಕರಣ ಸಹ ಮುಗಿದಿತ್ತು. ಇನ್ನು, ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಯುತ್ತಿದೆ ಎಂದು ನಿರ್ದೇಶಕ ಶಂಕರ್ ಗುರು ಸಹ ಹೇಳಿಕೊಂಡಿದ್ದರು. ಆದರೆ, ದೊಡ್ಡ ಚಿತ್ರಗಳ ಪೈಪೋಟಿ, ಎರಡನೆಯ ಲಾಕ್ಡೌನ್ ... ಹೀಗೆ ಬೇರೆಬೇರೆ ಕಾರಣಗಳಿಗೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು.
ಸೆಪ್ಟೆಂಬರ್ 24ಕ್ಕೆ ಚಿತ್ರದ ಬಿಡುಗಡೆಯನ್ನು ಪ್ಲಾನ್ ಮಾಡಲಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಸಂಬಂಧ ಹೊಸ ಪೋಸ್ಟರ್ ಸಹ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ವರ್ಷ ಬಿಡುಗಡೆಯಾಗುತ್ತಿರುವ ಧನಂಜಯ್ ಅಭಿನಯದ ನಾಲ್ಕನೇ ಚಿತ್ರ ಇದಾಗಲಿದೆ. ಇದಕ್ಕೂ ಮುನ್ನ, ಬಿಡುಗಡೆಯಾದ ‘ಪೊಗರು’ ಮತ್ತು ‘ಯುವರತ್ನ’ ಚಿತ್ರಗಳಲ್ಲಿ ಧನಂಜಯ್ ನಟಿಸಿದ್ದರು. ಇನ್ನು, ಆಗಸ್ಟ್ 20ಕ್ಕೆ ‘ಸಲಗ’ ಬಿಡುಗಡೆಯಾಗುತ್ತಿದ್ದು, ಅದರಲ್ಲೂ ಧನಂಜಯ್ ಪಾತ್ರ ಮಾಡಿದ್ದಾರೆ. ಅದಾಗಿ ಒಂದು ತಿಂಗಳಿಗೆ ‘ಬಡವ ರಾಸ್ಕಲ್’ ಬಿಡುಗಡೆಯಾಗಲಿದೆ. ಮೊದಲು ಮೂರು ಚಿತ್ರಗಳಲ್ಲಿ ಧನಂಜಯ್ ಅವರದ್ದು ಪ್ರಮುಖ ಪಾತ್ರಗಳಾದರೆ, ಈ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಡಾಲಿ ಪಿಕ್ಚರ್ಸ್ ಸಂಸ್ಥೆಯಡಿ ಈ ಚಿತ್ರವನ್ನು ನಿರ್ವಿುಸಿದ್ದಾರೆ.
‘ಬಡವ ರಾಸ್ಕಲ್’ನಲ್ಲಿ ಧನಂಜಯ್ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದು, ಮಿಕ್ಕಂತೆ ರಂಗಾಯಣ ರಘು, ತಾರಾ, ‘ಸ್ಪರ್ಶ’ ರೇಖಾ, ಗುರುಪ್ರಸಾದ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ.