ಕನ್ನಡದ ‘ಕೆಜಿಎಫ್’ ಚಿತ್ರ ಭಾರತೀಯ ಸಿನಿರಂಗದಲ್ಲಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಈ ಸಿನಿಮಾದಿಂದ ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರ ಖ್ಯಾತಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹೀಗಾಗಿ, ಏಪ್ರಿಲ್ ತಿಂಗಳಲ್ಲಿ ತೆರೆಗಪ್ಪಳಿಸಲಿರುವ ‘ಕೆಜಿಎಫ್ 2’ ಚಿತ್ರದ ಬಗ್ಗೆಯೂ ದೊಡ್ಡಮಟ್ಟದ ನಿರೀಕ್ಷೆ ಇದೆ. ಈಗಾಗಲೇ, ಹಲವು ಚಿತ್ರಗಳಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ನಡುವೆ ‘ಕೆಜಿಎಫ್’ ಬಗ್ಗೆ ನಟ ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ ಚಿತ್ರದಲ್ಲಿಯೂ ಒಂದು ಡೈಲಾಗ್ ಕೇಳಿಬಂದಿದೆ. ಸದ್ಯ, ಇದನ್ನು ಕುರಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಾಗಾದರೆ, ಅಕ್ಷಯ್ ಅಭಿನಯಿಸಿರುವ ‘ಬಚ್ಚನ್ ಪಾಂಡೆ’ ಸಿನಿಮಾದಲ್ಲಿ ‘ಕೆಜಿಎಫ್' ಚಿತ್ರದ ಬಗ್ಗೆ ಉಲ್ಲೇಖ ಮಾಡಿದ್ದು ಏಕೆ ಅಂತೀರಾ...? ಅಂದಹಾಗೆ, 'ಬಚ್ಚನ್ ಪಾಂಡೆ’ ಸಿನಿಮಾದಲ್ಲಿ 'ಬಚ್ಚನ್ ಪಾಂಡೆ' ಎಂಬ ಹೆಸರಿನ ವಿಲನ್ ಇರುತ್ತಾರೆ. ಅವರ ಬಗ್ಗೆ ಒಂದು ಸಿನಿಮಾ ಮಾಡಲು ಒಬ್ಬ ನಿರ್ದೇಶಕ ನಿರ್ಧರಿಸುತ್ತಾರೆ. ಬಚ್ಚನ್ ಪಾಂಡೆಯದ್ದು ದೊಡ್ಡ ಹೆಸರು. ಆ ಚಿತ್ರಕ್ಕೆ ನಾನೇ ಹೀರೋ ಆಗುತ್ತೇನೆ ಎಂದು ಆ ವಿಲನ್ ವಿನಂತಿಸುತ್ತಾನೆ. ಆಗ, ಆ ನಿರ್ದೇಶಕ ಇದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳ ಬೇಕಾಗುತ್ತದೆ. ಹೀಗೆ, ವಿಲನ್ ಕುರಿತು ತೆಗೆದ ಸಿನಿಮಾಗೆ ನಿರ್ದೇಶಕ 'ಬಿ.ಪಿ' ಎಂದು ಟೈಟಲ್ ಕೊಟ್ಟಿರುತ್ತಾರೆ. ಇನ್ನು, ಸಿನಿಮಾದಲ್ಲಿ ಈ ಬಿ.ಪಿ ಎಂಬ ಟೈಟಲ್ ಎಂದರೇನು ಎನ್ನುವ ಬಗ್ಗೆ ಚರ್ಚೆ ಬರುತ್ತದೆ. ಜತೆಗೆ, ಶಾರ್ಟ್ಫಾರ್ಮ್ನಲ್ಲಿ ಟೈಟಲ್ ಇಟ್ಟಿದ್ದೇಕೆ ಎನ್ನುವ ಪ್ರಶ್ನೆಯೂ ಬರುತ್ತದೆ. ಆಗ, 'ಕೆಜಿಎಫ್’ ಬಗ್ಗೆ ಉಲ್ಲೇಖ ಮಾಡಲಾಗಿದೆ.
'ಬಚ್ಚನ್ ಪಾಂಡೆ' ಸಿನಿಮಾದಲ್ಲಿರುವ ಡೈಲಾಗ್, ''ನಿರ್ದೇಶಕರು ಈ ಸಿನಿಮಾಗೆ ಬಿ.ಪಿ. ಎಂದು ಯಾಕೆ ಹೆಸರು ಇಟ್ಟಿದ್ದಾರೆ...? ಬಚ್ಚನ್ ಪಾಂಡೆ ಎಂದು ನೇರವಾಗೇ ಇಡಬಹುದಿತ್ತಲ್ಲ, ಎಂದು ಬಚ್ಚನ್ ಪಾಂಡೆಯ ಸಹಾಯಕ ಓರ್ವ ಕೇಳುತ್ತಾನೆ. ಕೋಲಾರ್ ಗೋಲ್ಡ್ ಫೀಲ್ಡ್ ಚಿತ್ರವನ್ನು ಕೆಜಿಎಫ್ ಎಂದು ಶಾರ್ಟ್ ಆಗಿ ಕರೆಯುತ್ತಾರಲ್ಲ, ಅದೇ ರೀತಿ ಬಚ್ಚನ್ ಪಾಂಡೆಗೆ ಬಿ.ಪಿ ಎಂದು ಕರೆಯಲಾಗುತ್ತದೆ, ಎಂಬ ಡೈಲಾಗ್ ಅನ್ನು ಮತ್ತೊಬ್ಬ ಹೊಡೆಯುತ್ತಾನೆ. ಈ ವೇಳೆ ಸೀನ್ ನಲ್ಲಿರುವವರು, ಹಾಗಿದ್ದರೆ ಬಿ.ಪಿ. ಕೇವಲ ಹಿಟ್ ಅಲ್ಲ ಸೂಪರ್ ಹಿಟ್ ಎಂದು ಸಂಭ್ರಮಿಸುತ್ತಾರೆ''. ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜತೆಗೆ, ಇತ್ತೀಚೆಗೆ, ರಿಲೀಸ್ ಆದ ‘ಮಿಷನ್ ಇಂಪಾಸಿಬಲ್’ ಸಿನಿಮಾದ ಟ್ರೈಲರ್ನಲ್ಲೂ ‘ಕೆಜಿಎಫ್’ ಸಿನಿಮಾ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ವಿಡಿಯೋಗಳು ನೋಡಿದರೆ ಕನ್ನಡದ ಸಿನಿಮಾವೊಂದು ಈ ರೇಂಜ್ಗೆ ಹವಾ ಕ್ರೀಯೆಟ್ ಮಾಡಿದೆ ಎಂಬ ಖುಷಿ ಕನ್ನಡಿಗರಲ್ಲಿ ಹೆಚ್ಚಾಗುತ್ತಿದೆ.