ಬಾಲಿವುಡ್ನ ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೊಮ್ಮೆ ರಿಮೇಕ್ ಮೊರೆ ಹೋಗುತ್ತಿದ್ದಾರೆ. ದಕ್ಷಿಣದಲ್ಲಿ ಹಿಟ್ ಲಿಸ್ಟ್ ಸೇರಿರುವ ಚಿತ್ರಗಳನ್ನು ಬಿಟೌನ್ ಮಂದಿಗೆ ತೋರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಆ ಸಿನಿಮಾಗಳ ಕೆಲಸಗಳನ್ನೂ ಶುರುಮಾಡಿದ್ದಾರೆ ಈ ಇಬ್ಬರು ನಟರು. ಒಂದು ‘ಸೆಲ್ಫಿ’ ಮತ್ತೊಂದು ‘ಭೋಲಾ’. ಮಲಯಾಳಂನಲ್ಲಿ 2019ರಲ್ಲಿ ಬಿಡುಗಡೆಯಾಗಿದ್ದ ‘ಡ್ರೖೆವಿಂಗ್ ಲೈಸೆನ್ಸ್’ ಸಿನಿಮಾ ಇದೀಗ ಹಿಂದಿಗೆ ‘ಸೆಲ್ಫಿ’ ಶೀರ್ಷಿಕೆಯೊಂದಿಗೆ ಸೆಟ್ಟೇರಿದೆ.
ಇತ್ತೀಚೆಗಷ್ಟೇ, ಚಿತ್ರದ ಫಸ್ಟ್ ಲುಕ್ ಫೋಟೋ ಹಂಚಿಕೊಂಡು, ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ ಅಕ್ಷಯ್. ಇದರಲ್ಲಿ ಅಕ್ಷಯ್ ಕುಮಾರ್ ಸಿನಿಮಾ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ‘ಡ್ರೖೆವಿಂಗ್ ಲೈಸೆನ್ಸ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿರಾಜ್ ಸುಕುಮಾರನ್, ಕರಣ್ ಜೋಹರ್ ಜತೆಗೆ ಸೇರಿ ‘ಸೆಲ್ಫಿ’ಗೆ ಜಂಟಿಯಾಗಿ ಹಣ ಹೂಡುತ್ತಿದ್ದಾರೆ. ಈ ಹಿಂದೆ ಅಕ್ಷಯ್ ನಟನೆಯ ‘ಗುಡ್ ನ್ಯೂಸ್’ ಚಿತ್ರ ನಿರ್ದೇಶಿಸಿದ್ದ ರಾಜ್ ಮೆಹ್ತಾ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
ಇನ್ನು, 2019ರಲ್ಲಿ ತಮಿಳಿನಲ್ಲಿ ಕಾರ್ತಿ ನಟನೆಯ ‘ಕೈದಿ’ ಚಿತ್ರ ಬಿಡುಗಡೆಯಾಗಿ ಹೆಸರು ಮಾಡಿತ್ತು. ಆ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದಿರುವ ಅಜಯ್ ದೇವಗನ್, ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಅಧಿಕೃತ ಶೀರ್ಷಿಕೆ ಘೋಷಣೆಯಾಗಿದೆ. ಚಿತ್ರಕ್ಕೆ ‘ಭೋಲಾ’ ಎಂಬ ಶೀರ್ಷಿಕೆಯೂ ಅಂತಿಮವಾಗಿದ್ದು, ಅಜಯ್ ಸಂಬಂಧಿ ಧಮೇಂದ್ರ ಶರ್ಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷ ಏನೆಂದರೆ ಅಜಯ್ ನಟಿಸುತ್ತಿರುವ ದಕ್ಷಿಣದ 10ನೇ ರಿಮೇಕ್ ಸಿನಿಮಾ ಇದಾಗಿದೆ.