ಸಿನಿವಾಣಿ

'ಭೀಮ'ನಿಗೆ ನಾಯಕಿ ಫಿಕ್ಸ್​; ರಂಗಭೂಮಿಯಿಂದ ಚಿತ್ರರಂಗದತ್ತ ಅಶ್ವಿನಿ

chetannadiger

ಬೆಂಗಳೂರು: 'ದುನಿಯಾ' ವಿಜಯ್​ ಅಭಿನಯದ 'ಭೀಮ' ಚಿತ್ರದಲ ಹಲವು ಪಾತ್ರಗಳನ್ನು ಇದುವರೆಗೂ ಪರಿಚಯಿಸಲಾಗಿದೆ. ಚಿತ್ರೀಕರಣ ಅರ್ಧ ಮುಗಿಯುವುದಕ್ಕೆ ಬಂದಿದೆ. ಆದರೆ, ಇದುವರೆಗೂ ನಾಯಕಿ ಯಾರೆಂದು ವಿಜಯ್​ ಆಗಲೀ, ಚಿತ್ರತಂಡದವರಾಗಲೀ ಬಹಿರಂಗಪಡಿಸುವುದಕ್ಕೆ ಹೋಗಿರಲಿಲ್ಲ. ಈಗ ಪ್ರೇಮಿಗಳ ದಿನದಂದು ಕೊನೆಗೂ ಚಿತ್ರದ ನಾಯಕಿ ಯಾರು ಎಂಬ ಗುಟ್ಟನ್ನು ರಟ್ಟು ಮಾಡಲಾಗಿದೆ.

ಅಂದಹಾಗೆ, 'ಭೀಮ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದು ಬೆಂಗಳೂರಿನ ಅಶ್ವಿನಿ. ಇದುವರೆಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅಶ್ವಿನಿ ಇದಕ್ಕೂ ಮುನ್ನ, ಅಚ್ಯುತ್​ ಕುಮಾರ್​, ಗೋಪಾಲಕೃಷ್ಣ ದೇಶಪಾಂಡೆ, ರಾಘು ಶಿವಮೊಗ್ಗ, ಸತೀಶ್​ ನೀನಾಸಂ ಅವರಿದ್ದ 'ತತ್ಕಾಲ್​' ತಂಡದಲ್ಲಿ ನಾಟಕಗಳನ್ನು ಮಾಡುತ್ತಿದ್ದರಂತೆ. ಹೀಗಿರುವಾಗಲೇ, ವಿಜಯ್​ ತಮ್ಮ ಚಿತ್ರಕ್ಕಾಗಿ ಸೂಕ್ತ ನಾಯಕಿಯ ಹುಡುಕಾಟದಲ್ಲಿದ್ದರು. ಆ ಸಂದರ್ಭದಲ್ಲಿ ಅಶ್ವಿನಿ ಅವರ ಪರಿಚಯವಾಗಿ, ಅವರು ನಾಯಕಿಯ ಪಾತ್ರಕ್ಕೆ ಸೂಕ್ತ ಎಂದನಿಸಿ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಬಿಬಿಎಂ ಓದಿರುವ ಅಶ್ವಿನಿ, ಈಗ 'ಭೀಮ'ನ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

'ಭೀಮ' ಚಿತ್ರವನ್ನು ಕೃಷ್ಣ ಸಾರ್ಥಕ್​ ಮತ್ತು ಜಗದೀಶ್​ ಗೌಡ ಜತೆಯಾಗಿ ನಿರ್ಮಿಸುತ್ತಿದ್ದು, ಚರಣ್​ರಾಜ್​ ಸಂಗೀತ ಸಂಯೋಜಿಸುತ್ತಿದ್ದಾರೆ.