ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರನ್ನು ಆಯ್ಕೆ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಇದಕ್ಕೂ ಮುನ್ನ ನಟ-ನಿರ್ದೇಶಕ ಸುನೀಲ್ ಪುರಾಣಿಕ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರ ಅವಧಿ ಪೂರ್ಣಗೊಳ್ಳುವ ಮುನ್ನವೇ ಸರ್ಕಾರವು ಅವರನ್ನು ಬದಲಿಸಿತ್ತು. ಮೂರು ತಿಂಗಳಿಂದ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಶನಿವಾರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಸುನೀಲ್ ಪುರಾಣಿಕ್ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಶೋಕ್ ಕಶ್ಯಪ್ ಅವರು ಸದಸ್ಯರಾಗಿದ್ದರು. ಈಗ ಅವರೇ ಅಧ್ಯಕ್ಷರಾಗಿರುವುದು ವಿಶೇಷ. ಅಶೋಕ್ ಕಶ್ಯಪ್ ಅವರು ಅಕಾಡೆಮಿಯ ಆರನೇ ಅಧ್ಯಕ್ಷರಾಗಿದ್ದು, ಇದಕ್ಕೂ ಮೊದಲು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ತಾರಾ, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಸುನೀಲ್ ಪುರಾಣಿಕ್ ಅಧ್ಯಕ್ಷರಾಗಿದ್ದರು.
ಉಪೇಂದ್ರ ನಿರ್ದೇಶನದ 'ಶ್' ಚಿತ್ರದ ಮೂಲಕ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್, 'ಹಾಲುಂಡ ತವರು', 'ಉಲ್ಟಾ ಪಲ್ಟಾ', 'ಓ ಮಲ್ಲಿಗೆ', 'ಮತದಾನ', 'ಸೂಪರ್', 'ಉಪ್ಪಿ 2' ಮುಂತಾದ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವುದರ ಜತೆಗೆ, 'ಲಿಫ್ಟ್ ಕೊಡ್ಲಾ' ಉಂತಾದ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ.