ಸಿನಿವಾಣಿ

ಡೆಡ್ಲಿ ಕಿಲ್ಲರ್ ಈ ಹುಡುಗಿ: ಥ್ರಿಲ್ಲರ್ ಮಂಜು ನಿರ್ದೇಶನದ ಚಿತ್ರದಲ್ಲಿ ನಿವೀಕ್ಷಾ

Webdesk - Ravikanth

ಬೆಂಗಳೂರು: ‘ಪಾತ್ರ’ ಚಿತ್ರದ ಮೂಲಕ ಇದೇ ವರ್ಷ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ನಿವೀಕ್ಷಾ. ಬಳಿಕ ಕನ್ನಡದ ಜತೆ ತಮಿಳು, ತೆಲುಗು ಚಿತ್ರಗಳಲ್ಲೂ ಮಿಂಚಿದ್ದಾರೆ. ನಟಿಸಿದ ಎರಡನೇ ಕನ್ನಡ ಸಿನಿಮಾ ‘ಸಿಂಧೂರ’ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ಹಾಗೆಯೇ ಇನ್ನೂ ಎರಡು ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ.

ಆ ಚಿತ್ರಗಳ ಬಗ್ಗೆ ಹೇಳಿಕೊಳ್ಳುವ ನಿವೀಕ್ಷಾ, ‘ಥ್ರಿಲ್ಲರ್ ಮಂಜು ಸರ್ ನಿರ್ದೇಶಿಸುತ್ತಿರುವ ‘ಡೆಡ್ಲಿ ಕಿಲ್ಲರ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ನಾನು ಪತಿಯೇ ಎಲ್ಲ ಎನ್ನುವ ಮುಗ್ಧ ಯುವತಿಯ ಪಾತ್ರದಲ್ಲಿ ನಟಿಸಿದ್ದೇನೆ. ರಾಕ್​ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ನಿರ್ವಣದ ‘ಲೈನ್​ವ್ಯಾನ್’ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದೇನೆ. ಆ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ನಾನಿಲ್ಲಿ ಹಳ್ಳಿ ಹುಡುಗಿಯಾಗಿದ್ದೇನೆ. ಒಂದು ಹಳ್ಳಿಯಲ್ಲಿ ವಿದ್ಯುತ್ ಸಂಪರ್ಕ ಹಲವು ದಿನಗಳ ಕಾಲ ಕಡಿತಗೊಳ್ಳುತ್ತದೆ. ಆಗ ಊರಿನ ಜನ ಎದುರಿಸುವ ಕಷ್ಟಗಳನ್ನೇ ನಿರ್ದೇಶಕ ರಘು ಶಾಸ್ತ್ರಿ ಕಾಮಿಡಿ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಈ ಹಿಂದೆ ತಮಿಳು ಹಾಸ್ಯನಟ ಯೋಗಿಬಾಬು ಜತೆ ‘ಕಾಕ್​ಟೇಲ್’ ಚಿತ್ರದಲ್ಲಿ ನಟಿಸಿದ್ದ ನಿವೀಕ್ಷಾ, ತೆಲುಗಿನಲ್ಲಿ ‘ಬಿಹೈಂಡ್ ಸಮ್ನ್’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂಬಿಎ ಓದಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರಂತೆ ನಿವೀಕ್ಷಾ. ನಂತರ ಸಿನಿಮಾ ಕನಸು ಹೊತ್ತು ಕೆಲವು ತಿಂಗಳ ಕಾಲ ರಂಗಭೂಮಿಯಲ್ಲಿ ತರಬೇತಿ ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈಗ ಒಂದೇ ವರ್ಷದಲ್ಲಿ ಆರು ಚಿತ್ರಗಳಲ್ಲಿ ನಟಿಸಿ, ಮತ್ತೊಂದು ತಮಿಳು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ.