ಸಿನಿವಾಣಿ

ಅರ್ಜುನ್ ಕಪೂರ್‌ಗೆ ಇದೇನು ಆಸೆ ಬಂತಪ್ಪಾ ...

ಸದ್ಯ ಲಾಕ್‌ಡೌನ್‌ನಲ್ಲಿ ಆರಾಮಾಗಿ ಮನೆಯಲ್ಲಿರುವ ಬಾಲಿವುಡ್ ನಟ ಅರ್ಜುನ್ ಕಪೂರ್, ಇತ್ತೀಚೆಗೆ ತಮ್ಮ ಅಭಿಮಾನಿಗಳ ಜತೆಗೆ ಮಾತನಾಡಿದ್ದಾರೆ. ಹಾಗೆ ಮಾತನಾಡುವ ಸಂದರ್ಭದಲ್ಲಿ ತಮ್ಮ ಬಹುವರ್ಷಗಳ ಆಸೆಯೊಂದನ್ನು ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅರ್ಜುನ್ ಕಪೂರ್ ಆಸೆ ಏನು ಗೊತ್ತಾ?

ತಮಗೆ ಡಿಟೆಕ್ಟಿವ್ ಆಗಬೇಕೆಂಬ ಆಸೆ ಇದೆ ಎಂದು ಖುದ್ದು ಅರ್ಜುನ್ ಕಪೂರ್ ಹೇಳಿಕೊಂಡಿದ್ದಾರೆ. ಅಲ್ಲ, ನಟನಾಗಿ ಕೆರಿಯರ್ ರೂಪಿಸಿಕೊಳ್ಳುತ್ತಿರುವ ಅರ್ಜುನ್, ಅದನ್ನು ಬಿಟ್ಟು ಇನ್ನೇನೋ ಮಾಡೋಕೆ ಯಾಕೆ ಹೊರಟಿದ್ದಾರೆ ಎಂಬಂತಹ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣ ಬರಬಹುದು.

ಆ ಪ್ರಶ್ನೆಯನ್ನೇನಾದರೂ ಅವರ ಮುಂದಿಟ್ಟರೆ, ಅರ್ಜುನ್ ನಗುತ್ತಾರೆ. ‘ಸ್ವಾಮಿ, ನಾನು ಹೇಳಿದ್ದು ರಿಯಲ್ ಲೈಫ್​ನಲ್ಲಲ್ಲ, ರೀಲ್‌ನಲ್ಲಿ’ ಎಂದು ಪಟ್ ಅಂತ ಉತ್ತರ ಕೊಡುತ್ತಾರೆ. ಇಷ್ಟಕ್ಕೂ ಅರ್ಜುನ್ ಕಪೂರ್‌ಗೆ ಡಿಟೆಕ್ಟಿವ್ ಆಗಬೇಕು ಎಂಬ ಆಸೆ ಇರುವುದು ಸಿನಿಮಾದಲ್ಲಿ ಮಾತ್ರ ಎಂಬುದು ಗೊತ್ತಿರಲಿ.

ಹೌದು, ಅರ್ಜುನ್‌ಗೆ ಚಿಕ್ಕಂದಿನಿಂದಲೂ ಪತ್ತೇದಾರಿ ಧಾರಾವಾಹಿಗಳ ಬಗ್ಗೆ ಆಸಕ್ತಿಯಂತೆ. ‘ಭ್ಯೋಮಕೇಶ ಬಕ್ಷಿ’ ಧಾರಾವಾಹಿಯ ದೊಡ್ಡ ಅಭಿಮಾನಿಯಾಗಿರುವ ಅರ್ಜುನ್, ಚಿಕ್ಕಂದಿನಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿದ್ದರಂತೆ. ‘ನಾನು ರಜತ್ ಕಪೂರ್ ಅಭಿನಯದ ಧಾರಾವಾಹಿಯನ್ನು ಅದೆಷ್ಟು ಬಾರಿ ನೋಡಿದ್ದೀನೋ ಗೊತ್ತಿಲ್ಲ. ಅದ್ಭುತ ಬರವಣಿಗೆ, ಅದ್ಭುತ ಅಭಿನಯ ಜತೆಯಾದರೆ ಏನಾಗುತ್ತದೋ, ಅದೇ ‘ಭ್ಯೋಮಕೇಶ ಬಕ್ಷಿ’. ಅದೊಂದು ಯೂನಿವರ್ಸಲ್ ಆದಂತಹ ಧಾರಾವಾಹಿ. ಎಷ್ಟು ಬಾರಿ ನೋಡಿದರೂ ಬೇಸರವಾಗುವುದಿಲ್ಲ’ ಎಂದಿದ್ದಾರೆ ಅರ್ಜುನ್.

ಆಗಿಂದ ಪರದೆಯ ಮೇಲೆ ಪತ್ತೇದಾರಿ ಪಾತ್ರ ಮಾಡುವ ಆಸೆ ಇದೆ ಎನ್ನುವ ಅರ್ಜುನ್, ‘ನನಗೆ ಬಾಲ್ಯದಿಂದಲೂ ಡಿಟೆಕ್ಟಿವ್ ಪಾತ್ರ ಮಾಡುವ ಆಸೆ ಇತ್ತು. ಮುಂದೊಂದು ದಿನ ಈ ಆಸೆ ಈಡೇರುತ್ತದಾ ನೋಡಬೇಕು’ ಎಂದಿದಾರೆ ಅರ್ಜುನ್.